ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಮತ್ತೆ ಮತ್ತೆ ಕಾಡಲಾರಂಭಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ರಾತ್ರೋರಾತ್ರಿ ಆಕ್ಸಿಜನ್ ಖಾಲಿಯಾದ ಹಿನ್ನೆಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಂತರ ಎಲ್ಲವೂ ಸರಿಹೋಯ್ತು ಎನ್ನುವಾಗಲೇ ಇಂದು ಸಹ ಮತ್ತೆ ಆಕ್ಸಿಜನ್ ಕೊರತೆ ಸಮಸ್ಯೆ ತಲೆದೋರಿತ್ತು. ಆದರೆ ಶಾಸಕ ಎಂ.ಪಿ ರೇಣುಕಾಚಾರ್ಯರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಹೊನ್ನಾಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹೊನ್ನಾಳಿಯ ಅಧಿಕಾರಿಗಳ ಸಭೆಗೆ ಶಾಸಕ ರೇಣುಕಾಚಾರ್ಯ ಆಗಮಿಸುತ್ತಿದ್ದಂತೆ, ಆಸ್ಪತ್ರೆಯಿಂದ ಆಕ್ಸಿಜನ್ ಖಾಲಿಯಾಗಿದೆ ಎಂಬ ಮಾಹಿತಿ ಬಂದಿದೆ. ತಡಮಾಡದ ಶಾಸಕ ರೇಣುಕಾಚಾರ್ಯ ಕೂಡಲೇ ಸಭೆ ಮೊಟಕು ಮಾಡಿ ಹರಿಹರದ ದಿ.ಸದರನ್ ಗ್ಯಾಸ್ ಸಂಸ್ಥೆಗೆ ಹೊರಟರು.
45 ಜನರು ಆಕ್ಸಿಜನ್ ಬೆಡ್ ನಲ್ಲಿದ್ದು, ಕೇವಲ ಒಂದೂವರೆ ಗಂಟೆಗೆ ಆಗುವಷ್ಟು ಮಾತ್ರ ಆಕ್ಸಿಜನ್ ಸಿಲಿಂಡರ್ ಬಾಕಿ ಇತ್ತು. ಹೇಗಾದರೂ ಮಾಡಿ ಜನರ ಪ್ರಾಣ ಉಳಿಸಲೇಬೇಕೆಂದು ಪಣ ತೊಟ್ಟ ಶಾಸಕ ರೇಣುಕಾಚಾರ್ಯ ಹರಿಹರದ ದಿ.ಸದರನ್ ಗ್ಯಾಸ್ ಸಂಸ್ಥೆಗೆ ಹೋಗುವ ಮಾರ್ಗ ಮಧ್ಯೆ ಜಗಳೂರಿಗೆ ಆಮ್ಲಜನಕ ಸಿಲಿಂಡರ್ ಕೊಂಡೊಯ್ಯಲಾಗುತ್ತಿತ್ತು.
ಹೊನ್ನಾಳಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿಲಿಂಡರ್ ಗಳನ್ನು ಜಗಳೂರಿನ ಬದಲಾಗಿ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಪೊಲೀಸ್ ಎಸ್ಕಾರ್ಟ್ ಮೂಲಕ ಕಳುಹಿಸಿಕೊಡಲಾಯಿತು. ಹೊನ್ನಾಳಿಯಲ್ಲಿ ಪದೇ ಪದೇ ಈ ಸಮಸ್ಯೆ ಉಂಟಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಶಾಸಕರ ಸಮಯಪ್ರಜ್ಞೆ ಮತ್ತು ಕಾಳಜಿಯಿಂದ ಆಕ್ಸಿಜನ್ ಸಿಕ್ಕ ಕಾರಣ ರೋಗಿಗಳು ನಿಟ್ಟುಸಿರು ಬಿಡುವಂತಾಯಿತು.