ಕೂಗು ನಿಮ್ಮದು ಧ್ವನಿ ನಮ್ಮದು

ರಾಜ್ಯದಲ್ಲಿ ಎಲ್ಲವೂ ಕಮಿಷನ್ ಲೆಕ್ಕಾಚಾರ, ಉನ್ನತ ಮಟ್ಟದ ತನಿಖೆಗೆ: ಡಿಕೆ ಶಿವಕುಮಾರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ಎಲ್ಲ ವಿಚಾರದಲ್ಲಿ ಕಮಿಷನ್ ವ್ಯವಹಾರ ಆಗುತ್ತಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಒತ್ತಾಯ ಮಾಡುತ್ತೇನೆ. ಯಾರೇ ಹೊರಗಡೆಯಿಂದ ಬಂದರೂ ಟೆಂಡರ್ ಆಗುವ ಮೊದಲೇ ಕಮಿಷನ್ ಕೇಳ್ತಾರೆ. ಇದು ನನಗಿರುವ ಅಧಿಕೃತ ಮಾಹಿತಿ. ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ ಮಾಡಿದ್ದಾರೆ.

ಕಳೆದ ವರ್ಷದ ಪ್ಯಾಕೇಜ್ ಯಾರಿಗೂ ತಲುಪಿಲ್ಲ. ನೇಕಾರರು, ಮಡಿವಾಳರು ಸೇರಿದಂತೆ ಯಾರಿಗೂ ಸಿಕ್ತಿಲ್ಲ. ಅಂಕಿ-ಅಂಶಗಳ ಬಿಡುಗಡೆ ಮಾಡಿ ಎಂದು ಹಲವು ಬಾರಿ ಹೇಳಿದೆವು. ಆದರೆ, ಬಿಡುಗಡೆ ಮಾಡಲಿಲ್ಲ. ಇವರು ಕೊರೋನಾ ಹೆಸರಲ್ಲಿ ಕಮಿಷನ್ ಹೊಡೆಯಲು ಸರ್ಕಸ್ ಮಾಡ್ತಿದ್ದಾರೆ. ಗ್ಲೋಬಲ್ ಟೆಂಡರ್ ಕರೆದಿದ್ದಾರೆ. ಬರೀ ಟೆಂಡರ್ ಕಮಿಷನ್ ಕೆಲಸ ಅಷ್ಟೇ. ಟೆಂಡರ್ ಎಲ್ಲ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇಲ್ಲದೇ ಪ್ರಧಾನಿ ಮೋದಿ ಡಿಸಿಗಳ ಜತೆ ಸಭೆ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರದ ಮೇಲೆ ಪ್ರಧಾನಿಗೆ ನಂಬಿಕೆಯಿಲ್ಲ. ಹೀಗಾಗಿ ಡಿಸಿಗಳ ಸಭೆ ಮಾಡುತ್ತಿದ್ದಾರೆ. ನಾನು ಜಿಲ್ಲೆಗಳಿಗೆ ಹೋಗಿ ಎಂದು ಹೇಳಿದ ಮೇಲೆ ಇವರು ಹೋದರು ಎಂದು ಸರ್ಕಾರದ ವಿರುದ್ಧ ಡಿ.ಕೆ‌ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮುಖ್ಯಮಂತ್ರಿಗಳು ತಮಗೆ ಏನು ಬರೆದುಕೊಟ್ಟರೂ ಅದನ್ನು ಓದುತ್ತಾರೆ. ಸಿಎಂಗೆ ಏನೂ ಗೊತ್ತಿಲ್ಲ. ಇವರೇ ಟೆಂಡರ್ ಎಲ್ಲ ಫೈನಲ್ ಮಾಡ್ತಾರೆ. ಇವರನ್ನು ಜತೆ ಇಟ್ಕೊಂಡು ಟೆಂಡರ್ ಕರೆಯುತ್ತಾರೆ. ಎಲ್ಲ ಗೋಲ್ಮಾಲ್ ಆಗ್ತಿದೆ ಎಂದ ಡಿಕೆಶಿ ಮುಂದೇನಾದರೂ ಆದರೆ ಸಿಎಂ ಯಡಿಯೂರಪ್ಪ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದಿದ್ದಾರೆ. ಸಚಿವರು ಕ್ವಾಲಿಟಿ ಕೇಳ್ತಿಲ್ಲ, ಕೇವಲ ಕಮಿಷನ್ ಕೇಳ್ತಿದ್ದಾರೆ. ಇವರ ನಡುವೆ ಹೊಂದಾಣಿಕೆ ಇಲ್ಲ. ಡಿಸಿಎಂ ಟೆಂಡರ್ ಎನ್ನುತ್ತಾರೆ. ಆದರೆ, ಆರೋಗ್ಯ ಸಚಿವರು ಟೆಂಡರ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಸರ್ಕಾರದಲ್ಲಿ ಗೊಂದಲ ಇರೋದು ಇದರಿಂದಲೇ ಗೊತ್ತಾಗುತ್ತದೆ. ಇವರದ್ದೆಲ್ಲ ಬರೀ ಕಮಿಷನ್ ಲೆಕ್ಕಾಚಾರ ಎಂದು ಡಿಕೆ ಶಿವಕುಮಾರ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಿಂದ ಸ್ಟೆರಾಯ್ಡ್ ಮಾತ್ರೆ ಹಂಚಿಕೆ ವಿಚಾರವಾಗಿ ಮಾತನಾಡಿರುವ ಡಿಕೆಶಿ, ರಕ್ಷಾ ರಾಮಯ್ಯ ಎಜುಕೇಟೆಡ್. ನನಗೂ ಸ್ಟೆರಾಯ್ಡ್ ಕೊಟ್ಟಿದ್ದಾರೆ. ಅದನ್ನು ಮಾತ್ರೆ ಕೊಟ್ಟಿರ್ಬೋದು. ನಾನು ಚೆಕ್ ಮಾಡಿದೆ. ಡಾಕ್ಟರ್ ಹೇಳಿರುವುದರಿಂದ ಟ್ಯಾಬ್ಲೆಟ್ ಕೊಟ್ಟಿದ್ದಾರೆ, ಅದು ತಪ್ಪಲ್ಲ. ಡ್ರಗ್ ಕಂಟ್ರೋಲ್ ಬೋರ್ಡ್ಗೆ ಕಂಪ್ಲೆಂಟ್ ಕೊಟ್ಟಿದ್ದಾರೆ. ನೋಡೋಣ ಆರೋಗ್ಯ ಸಚಿವರೆಲ್ಲ ಈ ಬಗ್ಗೆ ಹೇಳಲಿ ಎಂದು ವಾಗ್ದಾಳಿ ನಡೆಸಿದ ಅವರು. ಜನರಿಗೆ ಆರ್ಥಿಕ ಪ್ಯಾಕೇಜ್ ಅನ್ನು ಸರ್ಕಾರ ಕೊಡಲೇಬೇಕು. ಈ ಕೊರೋನಾ ಕಾಯಿಲೆ ಸರ್ಕಾರ ಕೊಟ್ಟಿದ್ದು. ಹಳ್ಳಿಗಳಲ್ಲೂ ಕರೋನ ಬರಲು ಸರ್ಕಾರವೇ ಕಾರಣ. ಹಳ್ಳಿಗಳಲ್ಲಿ ಕೃಷಿ ಮಾಡ್ತಿದ್ದವರಿಗೂ ಕೊರೋನಾ ಬಂದಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಅಲ್ಲಿ ಸಾಯುತ್ತಿದ್ದಾರೆ. ಕೊರೋನಾದಿಂದ ಮುಕ್ತರಾದ ಬಳಿಕ ಸಾವುಗಳಾಗುತ್ತಿವೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತೇನೆ. ಕೊರೋನಾ ಬಂದು ಹೋದ ಬಳಿಕ ಎಚ್ಚರಿಕೆಯಿಂದ ಇರಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

error: Content is protected !!