ಬೆಂಗಳೂರು: ಕೊವೀಡ್ ಎಮರ್ಜನ್ಸಿಯಂತ ಸಮಯದಲ್ಲಿ ಕಾಳಸಂತೆಯಲ್ಲಿ ರೆಮ್ಡಿಸಿವಿಯರ್ ಔಷಧಿ ಮಾರಾಟ ಜಾಲ ಪ್ರಕರಣದ ಹೆಸರಿನಲ್ಲಿ ವೈದ್ಯರನ್ನು ಬೆದರಿಸಿ 5 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ ಆರೋಪದಲ್ಲಿ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಸಂಜಯನಗರ ಪೊಲೀಸ್ ಠಾಣೆಯ ಮಹಿಳಾ ಇನ್ಸ್ಪೆಕ್ಟರ್ ಹಾಗೂ ಮೂವರು ಪೊಲೀಸ್ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ. ರೆಮ್ಡಿಸಿವಿಯರ್ ಇಂಜೆಕ್ಷನ್ನನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನೆಪದಲ್ಲಿ ವೈದ್ಯರನ್ನು ಠಾಣೆಗೆ ಕರೆಸಿ ಥಳಿಸಿದ್ದರು. ಅಲ್ಲದೇ ಪ್ರಕರಣದಿಂದ ಕೈಬಿಡಲು 5 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎನ್ನಲಾಗಿದೆ.
ವೈದ್ಯ ಡಾ.ನಾಗರಾಜ್ ಅವರನನ್ನು ವಿಚಾರಣೆ ನೆಪದಲ್ಲಿ ಥಳಿಸಿ 5 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ದೂರು ನೀಡಿದ್ದರು. ವೈದ್ಯರ ಮೇಲೆ ಹಲ್ಲೆ ನಡೆಸಿರುವ ಫೋಟೋ ಹಾಗೂ ಡಾಕ್ಟರ್ ಮಾತಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಈ ಬಗ್ಗೆ ಉತ್ತರ ವಿಭಾಗ ಡಿಸಿಪಿಗೂ ದೂರು ನೀಡಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಸಂಜಯನಗರ ಇನ್ಸ್ಪೆಕ್ಟರ್ ಕಾತ್ಯಾಯಿನಿ ಮತ್ತು ಮೂವರು ಪೊಲೀಸ್ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ. ಎಸಿಪಿ ರೀನಾ ಸುವರ್ಣ ಅವರಿಗೆ ಪ್ರಕರಣದ ತನಿಖೆಯ ಉಸ್ತುವಾರಿ ನೀಡಲಾಗಿದ್ದು ತನಿಖೆ ಮುಕ್ತಾಯವಾಗುವರೆಗೂ ಇನ್ ಸ್ಪೆಕ್ಟರ್ ಕಾತ್ಯಾಯಿನಿ ಮತ್ತು ಪೊಲೀಸ್ ಸಿಬ್ಬಂದಿಗೆ ಡಿಸಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶ ಹೊರಡಿಸಲಾಗಿದೆ.