ಬೆಳಗಾವಿ: ಬೆಳಗಾವಿ ಗ್ರಾಮೀಣ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ ರಾಜ್ಯ ಕಳ್ಳರಿಂದ ಕಂಟ್ರಿ ಪಿಸ್ತೂಲ್ ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಕಾ&ಸು ಡಿಸಿಪಿ ವಿಕ್ರಮ್ ಆಮ್ಟೆ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ನಂದೇಶ್ವರ್ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದೆ. ಇನ್ನು ಆರೋಪಗಳನ್ನು ಪ್ರಕಾಶ ಪಾಟೀಲ್ 31, ನಿತೈ ಮಂಡಲ 40 ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 51 ಲಕ್ಷ 60 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಒಟ್ಟು 848 ಗ್ರಾಂ ತೂಕದ 42 ಲಕ್ಷ ಮೌಲ್ಯದ ಚಿನ್ನಾಭರಣ, 60 ಸಾವಿರ ಮೌಲ್ಯದ ಒಂದು ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡುಗಳು ಹಾಗೂ 8 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಿಕೊಳ್ಳಲಾಗಿದ್ದು, ವಿಚಾರಣೆ ವೇಳೆ ಬಂಧಿತರು ಕಳೆದ ಮೂರು ತಿಂಗಳಲ್ಲಿ ಬೆಳಗಾವಿ ನಗರದ ಹಲವೆಡೆ ಮನೆಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಬಂಧಿತ ಆರೋಪಿಗಳು ಪೊಲೀಸರಿಗೆ ಚಾಕು ತೋರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪೇದೆಗಳಾದ ವೈ.ವೈ. ತಳೇವಾಡ ಹಾಗೂ ಸಿ.ಎ.ಹುಣಶ್ಯಾಳ ಆರೋಪಿಗಳನ್ನ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದರು. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.