ಕೂಗು ನಿಮ್ಮದು ಧ್ವನಿ ನಮ್ಮದು

ಹೀಗೊಂದು ಹಾರೈಕೆ

-ದೀಪಕ ಶಿಂಧೇ

ಆ ದೇವರಿಗೆ ಬೇಡುತ್ತೇನೆ, ನನ್ನ ಕತ್ತು ಜೀರಿದವರಿಗೆ ಕಲ್ಯಾಣವಾಗಲಿ.
ವಂಚಿಸಿದವರಿಗೆಲ್ಲ ಒಳ್ಳೆಯದಾಗಲಿ.
ನಂಬಿಸಿ ನೋಯಿಸಿದವರಿಗೆ ನ್ಯಾಯ ಸಿಗಲಿ.

ಆ ದೇವರಿಗೆ ಬೇಡುತ್ತೇನೆ ವಿನಾಕಾರಣ
ನಂಜು ಕಾರಿದವರಿಗೆ, ಲಟಿಕೆ ಮುರಿದು ಹಿಡಿಶಾಪ ಹಾಕಿದವರಿಗೆ, ನಗುವಿನ ಮುಖವಾಡ ಹೊತ್ತು
ವಿಷವನ್ನೇ ಉಣ್ಣಿಸ ಹೊರಟವರಿಗೆ
ಅವರು ಬಯಸಿದ ಪದವಿ ಹುದ್ದೆ ಆಸ್ತಿ ಅಂತಸ್ತು ಎಲ್ಲವೂ ಸಿಗಲಿ.

ಆ ದೇವರಿಗೆ ಬೇಡುತ್ತೇನೆ.. ನನ್ನ ಕಣ್ಣೀರು ಹಾಕಿಸಿದವರ ಹೊಟ್ಟೆ ತಣ್ಣಗಿರಲಿ, ಅವರ ನೆನಪಲ್ಲೆ ಬಿಕ್ಕುವಂತೆ ಮಾಡಿದವರಿಗೆ
ಬಯಸಿದ್ದೆಲ್ಲ ದಕ್ಕುತಿರಲಿ! ನಾನು ಚಿತೆ ಏರುವ ಕೊನೆಯ ಕ್ಷಣದವರೆಗೂ ಚಿಂತೆಯಲ್ಲೇ ಸುಡಲು ಹೊರಟವರಿಗೆ ನನ್ನ ಶವಸಂಸ್ಕಾರದ ಚಿತ್ರ ಸ್ಪಷ್ಟವಾಗಿ ಕಾಣುತಿರಲಿ.

ಆ ದೇವರಿಗೆ ಬೇಡುತ್ತೇನೆ.. ಬಯಕೆ ಇಷ್ಟೇ ನನ್ನದು… ಮೇಲೇರಿದ ಗಡಿಯಾರದ ಮುಳ್ಳೂ ಕೆಳಗೆ ಬರುತ್ತದೆ ಆಗಾಗ.. ಬದುಕಿನ ಏರಿಳಿತಗಳು
ಅವರನ್ನೆಂದೂ ಸತಾಯಿಸದಿರಲಿ.

ಆ ದೇವರಿಗೆ ಬೇಡುತ್ತೇನೆ, ನನ್ನ ಸಾವಿನ ಸುದ್ದಿ ಖುಷಿ ಕೊಡುವದೇ ಆಗಿದ್ದರೆ… ನಾನು ಎದುರಾಗದ ದಿನ ಅವರಿಗೆ ಸಮಾಧಾನ ಇದ್ದರೆ
ನಾನಿಲ್ಲದ ನೆನಪು ಅವರನ್ನು ಕಾಡದಿರಲಿ..

ಆ ದೇವರಿಗೆ ಬೇಡುತ್ತೇನೆ
ಇದ್ದಾಗ ಕಡೆಗಣಿಸಿದವರು ನಾನಿಲ್ಲದಾಗ ಪರಿತಪಿಸದಿರಲಿ. ಪ್ರೀತಿಸುವ ಹೃದಯಗಳು ಎಲ್ಲರಿಗೂ ಸಿಗುವದಿಲ್ಲ.. ಜನ್ಮ ಜನ್ಮಾಂತರದ ಪುಣ್ಯ ಮಾಡಿರಬೇಕಷ್ಟೇ. ಅವರ ಕರ್ಮಗಳು ಅವರನ್ನೆಂದೂ ತಿವಿಯದಿರಲಿ.

ಆ ದೇವರಿಗೆ ಬೇಡುತ್ತೇನೆ
ನಾನು ಪ್ರೀತಿಸಿದ ವ್ಯಕ್ತಿಗಳ ಬದುಕಲ್ಲಿ ಅವರು ಪ್ರೀತಿಸಿದವರ ಒಲವಾದರೂ ನಿರಂತರವಾಗಿ ಸಿಗುತಿರಲಿ…ಬದುಕಿರುವಾಗಲೆ ನನ್ನ ಒಂಟಿಯಾಗಿಸಿ ಸಾಯಿಸಿದ್ದಾರೆ ಅವರೆಲ್ಲ
ಪ್ರೀತಿಯ ಬರ ಅವರನ್ನಾದರೂ
ಸತಾಯಿಸದಿರಲಿ.

error: Content is protected !!