ಕೂಗು ನಿಮ್ಮದು ಧ್ವನಿ ನಮ್ಮದು

ನಿಷ್ಠೆ ಇರಲಿ ಸಾಕು….

-ದೀಪಕ್ ಶಿಂಧೇ

ಒಬ್ಬರು ಬೆಳೆದಂತೆಲ್ಲ ತುಳಿವ ಪ್ರಯತ್ನಗಳು ಅನವರತ ಇಲ್ಲಿ. ಆದರೆ ಯಾರು ಯಾರನ್ನೂ ತಡೆಯಲಾಗಿಲ್ಲ ಈ ಲೋಕದ ಸೃಷ್ಟಿಯಲ್ಲಿ…

ಗಳಿಸಬಹುದು ಸ್ವಾರ್ಥಿಯಾಗಿ ಸಾವಿರ ಲಕ್ಷ ಕೋಟಿ ಕೋಟಿ. ಒಳ್ಳೆಯದು ಮಾಡಿ ಹೃದಯಗಳ ಗೆದ್ದವರಿಗಷ್ಟೇ ಮರುಗುತ್ತಾರೆ ಜನ.

ಸತ್ಯ ಗೊತ್ತಿರಲಿ ವಿಜ್ಞಾನ ತಂತ್ರಜ್ಞಾನ ಎಷ್ಟು ಬೆಳೆದರು ಕೂಡ ಎದುರಾದ ಸಾವನ್ನು ಮುಂದೂಡಬಹುದಷ್ಟೇ.. ಆದರೆ ತಡೆದವರು ಯಾರೂ ಇಲ್ಲ ಈ ಲೋಕದಲ್ಲಿ!!

ಕಾಲು ಎಳೆವ ಜನ ಕಾಲ ಕಸವಾಗುತ್ತಾರೆ ಕಾಲ ಕೂಡಿ ಬರಬೇಕಷ್ಟೆ. ಬೆಳೆಯುವ ಮೊಳಕೆಯನ್ನೂ ಅರ್ಧಕ್ಕೆ ಚಿವುಟುತ್ತಾರೆ ಆಗಾಗ ಅವಡುಗಚ್ಚಿ ಮತ್ತೆ-ಮತ್ತೆ ಬೆಳೆಯಬೇಕಷ್ಟೇ..

ಅದೆಷ್ಟು ಕಲ್ಲು ಎಸೆದರೂ ಮಾವು ಸಿಹಿಯನ್ನಷ್ಟೇ ಕೊಡುತ್ತದೆ. ಸತ್ಯ ಹೇಳಿದ ಸಾಕ್ರೆಟಿಸ್ ನನ್ನು ಕಲ್ಲೆಸೆದು ಕೊಂದ ಜಗವಿದು. ಬುಡಸಮೇತ ಕತ್ತರಿಸಿದರೂ ಕೊರಡುಗಳು ಕೊನರಬೇಕಷ್ಟೇ…

ಬಲ ಕುಗ್ಗಿದರೂ ಛಲ ಕುಗ್ಗಬಾರದು ಎಂದೂ….
ನಡೆವ ಹಾದಿಯಲ್ಲಿ ನಿಷ್ಠೆ ಇರಬೇಕಷ್ಟೇ. ಆ ಧರ್ಮರಾಯನಿಗೂ ಸ್ವರ್ಗದ ಬಾಗಿಲು ತೆರೆದಿಲ್ಲ. ನಮನ್ನು ಕಡೆಗಣಿಸಲಿ ಬಿಡು ಲೋಕ. ಕೊನೆಗೂ ನಾಯಿಯೊಂದು ಸ್ವರ್ಗ ಸೇರಿದೆಯಂತೆ.

ಸಿಹಿ ಹಣ್ಣು ಕೊಡುವ ಮರಕ್ಕಷ್ಟೇ ಕಲ್ಲು ಬೀಳುತ್ತವೆ ಇಲ್ಲಿ. ಸಹಿಸಬೇಕು ಅಪಮಾನ ಅಸೂಯೆಗಳನ್ನು ಕೂಡ ನಾವಿಡುವ ಪ್ರತಿ ಹೆಜ್ಜೆಯಲ್ಲಿ.

ಮಾನ ಸಮ್ಮಾನಗಳು ಒಲಿಯುತ್ತವೆ ಕೊನೆಗೊಮ್ಮೆ. ಸತ್ಯದ ಅರಿವು ಎಲ್ಲರಿಗೂ ಆಗುವುದಿಲ್ಲ. ಬದುಕಿನ ಯುದ್ದ ಗೆದ್ದವರಿಗಷ್ಟೇ ಚಪ್ಪಾಳೆ ಜಯ ಘೋಷಗಳಿಲ್ಲಿ.

ಇರಲಿ ಪ್ರಯತ್ನಗಳು ನಿರಂತರ. ನೆನಪಿರಲಿ ನಡೆಯುವ ಮನುಷ್ಯರಷ್ಟೇ ಮತ್ತೆ-ಮತ್ತೆ ಎಡವುತ್ತಾರೆ ಇಲ್ಲಿ.

error: Content is protected !!