ಹುಬ್ಬಳ್ಳಿ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಧಾರವಾಡದ ಜಿಲ್ಲಾ ನ್ಯಾಯಾಲಯವು ಆದೇಶಿಸಿದೆ. ನವೆಂಬರ್ 23 ನೇ ತಾರೀಖಿನ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಧಾರವಾಡದ ಜಿಲ್ಲಾ 3ನೇ ಹೆಚ್ಚುವರಿ ನ್ಯಾಯಾಲಯ ಆದೇಶ ಮಾಡಿದೆ.
ಹೀಗಾಗಿ ವಿನಯ್ ಕುಲಕರ್ಣಿ ಈ ಸಲದ ದೀಪಾವಳಿಯನ್ನು ಜೈಲಲ್ಲೇ ಆಚರಿಸಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ. ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದ ಸಿಬಿಐ ಇವತ್ತು 3 ದಿನಗಳು ಪೂರೈಸಿದ ಹಿನ್ನೆಲೆ ವಿನಯ್ ಕುಲಕರ್ಣಿ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇನ್ನು ವಿನಯ್ ಕುಲಕರ್ಣಿ ಸಿಬಿಐ ಕಸ್ಟಡಿ ಮುಗಿದ ಹಿನ್ನೆಲೆ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸುವ ಸಾಧ್ಯತೆ ಇದ್ದು, ಇನ್ನು 14 ದಿನ ವಿನಯ್ ಕುಲಕರ್ಣಿಗೆ ಜೈಲೆ ಗತಿಯಾಗಿದೆ.