-ದೀಪಕ್ ಶಿಂಧೇ
ದೀಪವಾರಿಸಬೇಡ ಸಖೀ ಇರಲಿ ಬಿಡು.
ಗೊತ್ತು ಇಲ್ಲಿ ಯಾರೂ ಇಲ್ಲ ಸುಖೀ ಇರಲಿಬಿಡು.
ಉತ್ತರಿಸಲಿ ಕಾಲ ಎಲ್ಲ ಪ್ರಶ್ನೆಗಳಿಗೂ ಕಾಯುತ್ತೇನೆ ಅನವರತ ಮೌನ-ಮಾತಾಗುವ ಭರವಸೆಯಲ್ಲಿ!!
ದೀಪವಾರಿಸಬೇಡ ಸಖೀ ಇರಲಿ ಬಿಡು.
ಜಗವ ಬೆಳಗುವ ದೀಪದ ಕೆಳಗೂ ಕತ್ತಲಿರುವಾಗ.
ಒಲವ ಹಣತೆಗಳು ಮತ್ತೆ ಹೊತ್ತಿ ಉರಿಯಲಿ ಬಿಡು.
ಉರಿವ ಎದೆಯ ಬೆಂಕಿಗೆ ಇಲ್ಲಿ ತುಪ್ಪ ಸುರಿದವರೆಷ್ಟೋ?? ಅವರ ಹರಕೆಗಳು ಫಲಿಸಿಲ್ಲ ನಿಜ ಶಾಪಗಳಾದರೂ ತಟ್ಟಲಿ ಬಿಡು.
ದೀಪವಾರಿಸಬೇಡ ಸಖೀ ಇರಲಿಬಿಡು.
ಬೆಂಕಿ ಹಚ್ಚುವದಕ್ಕೆ ಬತ್ತಿ ಇಟ್ಟವರೆಷ್ಟೋ??
ಋಣವ ತೀರಿಸಲು ಕಡ್ಡಿಗಳ ಗೀರಿದವರೆಷ್ಟೋ??
ಎಣ್ಣೆ ತೀರುವ ಮೊದಲೇ ಆರಿಸ ಹೊರಟವರೆಷ್ಟೋ…??
ದೀಪವಾರಿಸಬೇಡ ಸಖೀ ಇರಲಿ ಬಿಡು.
ಉರಿವ ಬೆಂಕಿಯೂ ಮತ್ತೆ ಒಲವ ಹಬ್ಬಿಸಲಿ,
ಎದುರುಗೊಂಡವರ ಮುಖ ಸ್ಪಷ್ಟವಾಗಿರಲಿ
ಇದು ದೀಪಾವಳಿಗೆ ಅಷ್ಟೇ ಅಲ್ಲ ದೀಪಗಳು ಉರಿಯಲಿ ಶಾಶ್ವತ ದೀಪವಾರಿಸಬೇಡ ಸಖಿ ಇರಲಿ ಬಿಡು.
ನನ್ನ ಎದೆಗೆ ಬಿದ್ದ ಬೆಂಕಿಯೂ ಬೆಳಕಾಗಲಿ ಒಮ್ಮೆ.
ಹೊತ್ತಲಿ ಒಲವ ಹಣತೆಗಳು. ಸಮಯದ ತೆಕ್ಕೆಗೆ ಎಲ್ಲರೂ ಸಿಲುಕುತ್ತಾರೆ. ಕತ್ತಲಾಯಿತು ಎಂದು ಅಳುಕದಿರು. ದೀಪವಾರಿಸಬೇಡ ಸಖಿ ಇರಲಿ ಬಿಡು.
ದೇವರ ಜಗುಲಿಯಲಿ,ಮನೆಯ ಮಾಡಿನಲಿ,
ತುಳಸಿ ಕಟ್ಟೆಯಲಿ,ಹಣತೆಯೊಂದನು ಹಚ್ಚಿ ಇಡು
ಇದ್ದರೆ ನಾನು ಕಂಡರೆ ದೀಪದ ಬೆಳಕಿನಲ್ಲಿ
ನೋಡಿ ಪರಿಚಯದ ನಗೆಯ ನಕ್ಕು ಬಿಡು.
ದೀಪವಾರಿಸಬೇಡ ಸಖೀ ಇರಲಿ ಬಿಡು
ದ್ವೇಷ,ಅಸೂಯೇ,ಮತ್ಸರದ ಕತ್ತಲೆ ತೊಲಗಲಿ ಇನ್ನಾದರೂ ಒಲವ ಹಣತೆಯನೊಂದು
ನಿನ್ನೆದೆಯ ಗೂಡಿನಲ್ಲಿ ಹಚ್ಚಿಬಿಡು
ದೀಪವಾರಿಸಬೇಡ ಸಖೀ ಇರಲಿ ಬಿಡು.
ನಿನ್ನ ಮನೆಯ ದೇವರಿಗೆ ತುಪ್ಪದ ದೀಪ ಹಚ್ಚಿ ಇಡು. ನನ್ನ ಹೆಸರಿನಲ್ಲೂ ದೀಪವಿದೆ
ಇರಲಿಬಿಡು. ನಾನು ಒಲವ ಬೆಳಕನ್ನಷ್ಟೇ ಹಂಚುತ್ತೆನೆ ಎದುರಾಗದ ದಿನ ಯೋಚಿಸಬೇಡ ದೀಪವಾರಿಸಬೇಡ ಸಖೀ ಇರಲಿಬಿಡು.
ಸಾಧ್ಯವಾದರೆ ನಾನಿಲ್ಲದ ದಿನ ನನ್ನ ಗೋರಿಗೂ ಒಂದು ದೀಪ ಹಚ್ಚಿಬಿಡು. ಮಣ್ಣಿನಲ್ಲಿ ಮಣ್ಣಾಗಲಿ ಬೂದಿಯಾಗುವ ದೇಹ. ತಣಿಯಲಿ ಪ್ರೀತಿಗೆ ಪರಿತಪಿಸಿದ ಆತ್ಮ. ವಿನಂತಿ ಇಷ್ಟೇ…
ದೀಪವಾರಿಸಬೇಡ ಸಖೀ ಇರಲಿ ಬಿಡು.