ವಿಜಯಪುರ: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಭೀಮಾತೀರದ ಮಹಾದೇವ ಸಾಹುಕಾರ್ ನ ಇಬ್ಬರು ಸಹಚರರು ಹಾಡುಹಗಲೇ ನಡೆದ ಪೈರಿಂಗ್ ನಲ್ಲಿ ಬಲಿಯಾಗಿದ್ದಾರೆ. ಗುಂಡಿನ ದಾಳಿಗೆ ಒಳಗಾಗಿರುವ ಸಾಹುಕಾರ್ ವೆಂಟಿಲೇಟಿರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅತ್ತ ಪೊಲಿಸರು ದಾಳಿಕೋರರ ಬೆನ್ನು ಹತ್ತಿದ್ದಾರೆ.
ಭೀಮಾತೀರದ ಮಹಾದೇವ ಬೈರಗೊಂಡ ಹಾಗೂ ಇತರರ ಮೇಲೆ ನಿನ್ನೆ ಗುಂಡಿನ ದಾಳಿ ನಡೆದಿತ್ತು. ವೈದ್ಯರು ಮಹಾದೇವ ದೇಹ ಹೊಕ್ಕಿದ್ದ ಎರಡು ಗುಂಡುಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾದೇವ ಆರೋಗ್ಯ ಸ್ಥಿರವಾಗಿದ್ದು ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಎಲ್ಡಿಇ ಅಸ್ಪತ್ರೆ ಮುಖ್ಯಸ್ಥ ಡಾ.ಹೊನ್ನುಟಗಿ ಮಾಹಿತಿ ನೀಡಿದ್ದಾರೆ. ದಾಳಿಯಲ್ಲಿ ಮಹಾದೇವ ಜೊತೆಗಿದ್ದ ಇಬ್ಬರು ಸಾವನ್ನಪ್ಪಿದ್ದು ನಿನ್ನೆ ಮಹಾದೇವ ಆಪ್ತ ಬಾಬುರಾವ್ ದಾಳಿ ನಡೆದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಇಂದು ಚಿಕಿತ್ಸೆ ಫಲಕಾರಿಯಾಗದೇ ಮಹಾದೇವ ಕಾರ್ ಚಾಲಕ ಲಕ್ಷ್ಮಣ ಸಾವನ್ನಪ್ಪಿದ ಪರಿಣಾಮ ಗುಂಡಿನ ದಾಳಿಯಲ್ಲಿ ಎರಡು ಜೀವ ಬಲಿಯಾಗಿವೆ. ದಾಳಿ ಮಾಡಿದವರ ಬೆನ್ನು ಬಿದ್ದಿರುವ ಪೊಲೀಸರಿಗೆ ದಾಳಿಕೋರರ ಸುಳಿವು ಸಿಕ್ಕಿಲ್ಲ. ಗಾಯಾಳು ಮಹಾದೇವ ಭೈರಗೊಂಡ ನನ್ನು ಹೈದ್ರಾಬಾದ್ ಗೆ ಶಿಪ್ಟ್ ಮಾಡೋ ಸಾಧ್ಯತೆ ಇದ್ದು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವ ಸಾಧ್ಯತೆ ಹೆಚ್ಚಾಗಿದೆ. ದಾಳಿ ನಡೆದ ಘಟನೆ ಸ್ಥಳಕ್ಕೆ FSL ತಂಡ ಆಗಮಿಸಿ ಪರಿಶೀಲನೆ ನಡೆಸಿದ್ರು. ಬೆಳಗಾವಿಯ FSL ತಂಡದ ಮೂವರು ಸದಸ್ಯರು ಘಟನಾ ಸ್ಥಳದಲ್ಲಿ ಅಪಘಾತವಾದ ಮಹಾದೇವ ಕಾರ್ ಹಾಗೂ ದಾಳಿಗೆ ಬಳಕೆಯಾದ ಟಿಪ್ಪರ್, ಸ್ಥಳದಲ್ಲಿ ಸಿಕ್ಕ ಜೀವಂತ ಗುಂಡುಗಳು ಹಾಗೂ ಬೈಕ್ ಗಳನ್ನು FSL ತಂಡ ಪರಿಶೀಲನೆ ನಡೆಸಿತು. ಅಲ್ಲದೇ ಘಟನಾ ಸ್ಥಳಕ್ಕೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದ್ರು.
ಪೈರಿಂಗ್ ಕೇಸ್ ಕುರಿತು ಸ್ಥಳ ಪರಿಶೀಲನೆ ಜೊತೆಗೆ ಪೊಲಿಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾದ್ಯಮಗಳೊಂದಿಗೆ ಮಾತನಾಡಿದ ಐಜಿಪಿ, ಈ ದಾಳಿ ನಡೆಸಿದವರ ಗುರುತು ಪತ್ತೆಯಾಗಿದೆ. ಅತೀ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು. 15 ಜನರು ಗುಂಡಿನ ದಾಳಿ ನಡೆಸಿದ್ದಾರೆ. ಪೆಟ್ರೋಲ್ ಬಾಂಬ್ ಎಸೆಯಲಾಗಿದ್ದರೂ ಸ್ಪೋಟವಾಗಿಲ್ಲ. ಘಟನಾ ಸ್ಥಳದಲ್ಲಿ ಮಚ್ಚು, ಲಾಂಗುಗಳೂ ಸಿಕ್ಕಿವೆ. ದಾಳಿ ಮಾಡಿದವರ ಕಡೆಯಲ್ಲೂ ಒಂದಿಬ್ಬರಿಗೆ ಗಾಯಗಳಾಗಿವೆ. ಆದ್ದರಿಂದ ವಿಜಯಪುರ, ಮಹಾರಾಷ್ಟ್ರದ ಸೋಲಾಪುರ, ಪುಣೆಗಳಲ್ಲಿ ಆಸ್ಪತ್ರೆಗಳಿಗೆ ಗಾಯಾಳುಗಳ ಮಾಹಿತಿ ಕೇಳಿದ್ದೇವೆ ಎಂದು ತಿಳಿಸಿದ್ರು. ನಿನ್ನೆ ಸಂಜೆಯಿಂದ 35 ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. 37 ಜನ ಇನ್ಸಪೆಕ್ಟರ್ ಗಳು ಉಮರಾಣಿ, ವಿಜಯಪುರ ಸೇರಿ ನಾನಾ ಕಡೆಗಳಲ್ಲಿ ಗಸ್ತು ನಡೆಸಿದ್ದಾರೆ. 21 ರಿಂದ 30 ವರ್ಷದೊಳಗಿನವರು ಇದರಲ್ಲಿ ಭಾಗಿಯಾಗಿದ್ದಾರೆ.
ಈ ದಾಳಿಯಲ್ಲಿ ಪಾಲ್ಗೊಂಡ ಎಲ್ಲರನ್ನು ಹಿಡಿಯುತ್ತೇವೆ ಎಂದರು. ಈ ದಾಳಿಯಲ್ಲಿ ಪುಣೆ, ಯುಪಿ ಕಡೆಯ ಜನರೂ ಭಾಗಿಯಾಗಿರುವ ಸಾಧ್ಯತೆಯಿದೆ. ಈ ದಾಳಿ ಇದು ಪಕ್ಕಾ ಪ್ಲ್ಯಾನ್, ಈಗಾಗಲೇ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಇದೊಂದು ಒಳ್ಳೆಯ ತನಿಖೆಯಾಗಲಿದೆ. ಜನರು ಈ ಪ್ರಕರಣದ ತನಿಖೆಯನ್ನು ನೆನಪಿನಲ್ಲಿ ಇಡಲಿದ್ದಾರೆ ಎಂದು ತಿಳಿಸಿದ್ರು. ವಿಜಯಪುರ, ಕಲಬುರಗಿಯಲ್ಲಿ ಆ್ಯಕ್ಟಿವ್ ಗ್ಯಾಂಗ್ ಗಳನ್ನು ಮಟ್ಟ ಹಾಕಲಾಗುವುದು. ವಿಜಯಪುರ, ಬಾಗಲಕೋಟೆ ಜಿಲ್ಲೆಗಳ 1500 ಜನ ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದರು. ಒಟ್ನಲ್ಲಿ ಭೀಮಾತೀರದಲ್ಲಿ ಗುಂಡಿನ ದಾಳಿ ಇಬ್ಬರನ್ನು ಬಲಿ ಪಡೆದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಪೊಲಿಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ಮೂಲಕ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಿ ಎನ್ನುವದೇ ವಿಜಯಪುರ ಜಿಲ್ಲೆಯ ಜನತೆ ಆಶಯವಾಗಿದೆ.