ಬೆಳಗಾವಿ: ಗಡಿನಾಡು ಬೆಳಗಾವಿ ಕನ್ನಡ ಜಾತ್ರೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬೆಳಗಾವಿಯ ಎಲ್ಲಿ ನೋಡಿದರೂ ಕನ್ನಡದ ಕಂಪು ಕಾಣುತ್ತಿದೆ. ಈ ಮಧ್ಯೆ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜಾರೋಹಣ ಮಾಡಲಾಗಿದ್ದು, ಕನ್ನಡ ಪರ ಹೋರಾಟಗಾರರಿಂದ ಧ್ವಜಾರೋಹಣ ನಡೆದಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಾಡಿದ್ದು, ಯುವಕ ರವಿ ಭಾವಿ ಸೇರಿ ಅನೇಕರಿಂದ ಧ್ವಜಾರೋಹಣ ಮಾಡಲಾಗಿದೆ. ಇನ್ನು ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಾಟಕ್ಕಾಗಿ ಕನ್ನಡಪರ ಹೋರಾಟಗಾರ್ತಿ ಕಸ್ತೂರಿ ಭಾವಿ ಅನೇಕ ವರ್ಷದಿಂದ ಶಪಥ ಮಾಡಿದ್ದರು. ಕನ್ನಡ ಬಾವುಟ ಹಾರಿಸೋ ವರೆಗೆ ಚಪ್ಪಲಿ ಹಾಕಲ್ಲ ಎಂದು ಶಪಥ ಮಾಡಿದ್ದ ಹೋರಾಟಗಾರ್ತಿಯ ವಿಭಿನ್ನ ಶಪಥ ಇಂದು ಈಡೇರಿದೆ. ಇನ್ನು ಪಾಲಿಕೆಯಲ್ಲಿ ಎಂಇಎಸ್ ಪ್ರಭಾವ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಕನ್ನಡ ಧ್ವಜ ಇರಲಿಲ್ಲ. ಆದರೆ ಪಾಲಿಕೆ ಮೇಲೆ ಧ್ಜಜ ಹಾರಿಸುತ್ತಿದ್ದಂತೆ ವಿಷಯ ತಿಳಿದ ಪೊಲೀಸರು ಕನ್ನಡ ಧ್ವಜ ತೆರವುಗೊಳಿಸಿದ್ದಾರೆ. ಪೊಲೀಸರ ಈ ನಡೆಗೆ ಕನ್ನಡ ಪರ ಹೋರಾಟಗಾರರು ಹಾಗೂ ಪೊಲೀಸರ ನಡುವೆ ವಾಗ್ದಾದ ನಡೆದಿದ್ದು, ಪೊಲೀಸರ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಹಿಳೆ ದಿಕ್ಕಾರ ಕೂಗಿ ಪ್ರತಿಭಟಿಸಿದ್ದಾರೆ.