ಬೆಳಗಾವಿ: ಕೊರೊನಾ ಆತಂಕದ ಮಧ್ಯೆಯೂ ಕನ್ನಡಿಗರು ಸರಳ ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧತೆ ನಡೆಸಿದ್ದಾರೆ. ಅತ್ತ ಮಹಾರಾಷ್ಟ್ರದ ಮಂತ್ರಿಗಳು ಮುಗ್ದ ಮರಾಠಿಗರ ಭಾವನೆಗಳನ್ನು ಕೆದಕಿ, ಮತ್ತೆ ಭಾಷಾ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ನವೆಂಬರ್ 1 ರಂದು ಮಹಾರಾಷ್ಟ್ರ ಸಚಿವರು ಕಪ್ಪು ಬಟ್ಟೆ ಧರಿಸಿ ಕರಾಳ ದಿನಾಚರಣೆ ಆಚರಿಸಲು ನಿರ್ಧರಿಸಿದ್ದಾರೆ. ಮಹಾ ಮಂತ್ರಿಗಳ ನಾಡದ್ರೋಹಿ ಕೃತ್ಯ ಕೆಚ್ಚೆದೆಯ ಕನ್ನಡಿಗರನ್ನ ಕೆರಳಿಸಿದೆ. ರಾಜ್ಯದ ಯಾವೊಬ್ಬ ನಾಯಕನು ಮಹಾ ಮಂತ್ರಿಗಳಿಗೆ ತೀರುಗೇಟು ನೀಡುವ ಕೆಲಸ ಮಾಡದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು.. ಮತ್ತೆ ಮಹಾರಾಷ್ಟ್ರ ಮಂತ್ರಿಗಳು ಕರ್ನಾಟಕ- ಮಹಾರಾಷ್ಟ್ರ ಸಂಬಂಧಕ್ಕೆ ಹುಳಿ ಹಿಂಡೋ ಕೆಲಸ ಮಾಡಿದ್ದಾರೆ. ರಾಜ್ಯೋತ್ಸವಕ್ಕೆ ಮಹಾರಾಷ್ಟ್ರ ಸರ್ಕಾರ ವಿರೋಧಿಸಿದೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಖ್ಯಾತೆ ತೆಗೆಯಲು ಮಹಾರಾಷ್ಟ್ರ ನಿರ್ಧಾರ ಮಾಡಿದೆ. ರಾಜ್ಯೋತ್ಸವ ದಿನ ಮಹಾರಾಷ್ಟ್ರದ ಎಲ್ಲಾ ಸಚಿವರು ಕಪ್ಪು ಪಟ್ಟಿ ಧರಿಸಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಏಕನಾಥ, ಚಗನ್ ಭುಜಬಲ್ ಈ ಸೂಚನೆ ನೀಡಿದ್ದಾರೆ. ಸಿಎಂ ಉದ್ಧವ ಠಾಕ್ರೆ ಸಂಪುಟದಲ್ಲಿನ ಎಲ್ಲಾ ಸದಸ್ಯರಿಗೆ ಸಲಹೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿರುವ ಕಾಂಗ್ರೆಸ್, ಶಿವಸೇನೆ ಹಾಗೂ ಎನ್ ಸಿ ಪಿ ಸಮ್ಮಿಶ್ರ ಸರ್ಕಾರದ ಸಚಿವರು ಕನ್ನಡ ರಾಜ್ಯೋತ್ಸವ ದಿನ ಎಂಇಎಸ್ ನ ಕರಾಳ ದಿನ ಆಚರಣೆ ಮಾಡಲಿದ್ದಾರೆ. ಅಲ್ಲದೇ ಕರ್ನಾಟಕ ಸರ್ಕಾರ ಮತ್ತು ಪೊಲೀಸರು, ಮರಾಠಿ ಭಾಷಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಮಹಾರಾಷ್ಟ್ರ ಸಚಿವ ಏಕನಾಥ ಸಿಂಧೆ ಹೇಳಿದ್ದಾರೆ.
ಇನ್ನೂ ಈ ಬಾರಿ ಎಂಇಎಸ್ ಗೆ ಕರಾಳ ದಿನ ಆಚರಣೆಗೆ ಜಿಲ್ಲಾಡಳಿತ, ಪೊಲೀಸರು ಇಲಾಖೆ ಅನುಮತಿ ನೀಡದಿರಲು ನಿರ್ಧರಿಸಿದೆ. ಕೊರೊನಾ ಅಸ್ತ್ರವನ್ನ ಎಂಇಎಸ್ ವಿರುದ್ಧ ಪ್ರಯೋಗಿಸಿ ಕರಾಳ ದಿನದ ಮೆರವಣಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದೆ. ಆದ್ರು ಪ್ರತಿ ಬಾರಿ ಹೀಗೆ ಹೇಳಿ ಕೊನೆ ಕ್ಷಣದಲ್ಲಿ ಕರಾಳ ದಿನಕ್ಕೆ ಹಿಂದನ ರಾತ್ರಿ ಅನುಮತಿ ನೀಡುತ್ತ ಬರಲಾಗಿದೆ. ಇತ್ತ ಎಂಇಎಸ್ ಕರಾಳ ದಿನ ಆಚರಣೆಗೆ ಅವಕಾಶ ನೀಡದಂತೆ ಪೊಲೀಸರಿಗೆ ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ. ಜೊತೆಗೆ ಮಹಾರಾಷ್ಟ್ರ ಮಂತ್ರಿಗಳ ಹೇಳಿಕೆಗೆ ಕನ್ನಡ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. ಮಹಾರಾಷ್ಟ್ರಕ್ಕೆ ಕರ್ನಾಟಕ ಸರ್ಕಾರದ ಮಂತ್ರಿಗಳು ಬುದ್ಧಿ ಹೇಳುವ ಕೆಲಸ ಮಾಡುವಂತೆ ಕನ್ನಡ ಹೋರಾಟಗಾರರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ದಿನವೇ ಮಹಾರಾಷ್ಟ್ರ ಮಂತ್ರಿಗಳು ಕರಾಳ ಆಚರಿಸಲು ಮುಂದಾಗಿದ್ದಾರೆ. ಪದೇ ಪದೇ ನಾಡು, ನುಡಿ, ಗಡಿ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿರುವ ಎಂಇಎಸ್ ಮತ್ತು ಮಹಾರಾಷ್ಟ್ರ ನಾಯಕರಿಗೆ ಪಾಠ ಕಲಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡಬೇಕಿದೆ.