ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ಅರಮನೆ ಆವರಣದಲ್ಲಿ ಸಂಭ್ರಮ ಮನೆ ಮಾಡಿದೆ. ಕೊರೋನಾ ಹಿನ್ನೆಲೆಯಲ್ಲಿ ಕೇವಲ 300 ಮಂದಿ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸೀಮಿತ ಮಂದಿಯಷ್ಟೇ ಈ ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆ 59 ನಿಮಿಷದಿಂದ 3 ಗಂಟೆ 20 ನಿಮಿಷದೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಂದಿ ದ್ವಜಕ್ಕೆ ಪೂಜೆ ಸಲ್ಲಿಸಿ, 3 ಗಂಟೆ 40 ನಿಮಿಷದಿಂದ 4 ಗಂಟೆ 15 ನಿಮಿಷದೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
ಇನ್ನು ಅರಮನೆ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಅರಮನೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದಂತೆ 300 ಮಂದಿ ಪಾಲ್ಗೊಳ್ಳುವ ಗ್ಯಾಲರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಸವ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಕೇವಲ ಎರಡು ಸ್ತಬ್ದ ಚಿತ್ರಗಳು, ಐದು ಜನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಕೊರೋನಾ ಜಾಗೃತಿ ಮೂಡಿಸುವ ಒಂದು ಸ್ತಬ್ದಚಿತ್ರ ಪ್ರಮುಖವಾಗಿ ಪಾಲ್ಗೊಳ್ಳುತ್ತಿದೆ. ಜನರು ವರ್ಚುವಲ್ ಹಾಗೂ ಮಾಧ್ಯಮ ಮೂಲಕವಷ್ಟೇ ಮೆರವಣಿಗೆ ವೀಕ್ಷಿಸಿ ಕಣ್ತುಂಬಿಕೊಳ್ಳಬೇಕಾಗಿದೆ.