ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನು ಹೈ ಕಮಾಂಡ್ ನಿರ್ಧರಿಸುತ್ತದೆ. ಜನರು ಅಭಿಮಾನದಿಂದ ನಾನು ಮತ್ತೆ ಸಿಎಂ ಆಗಲಿ ಅಂತ ಹೇಳ್ತಾರೆ ಎಂದಿರುವ ಟಗರು, ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲಾ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪದೇ ಪದೇ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರೆ ಅಂತ ಲಕ್ಷ್ಮಣ ಸವದಿ ಹೇಳ್ತಿದ್ದಾರೆ. ಆದ್ರೆ ರಾಜಕೀಯವಾಗಿ ಅವರು ಸುಮ್ಮನೆ ಹೇಳ್ತಾರೆ. ರಾಜ್ಯದಲ್ಲಿ ಪ್ರವಾಹದಿಂದ ಜನ ನಲುಗಿದ್ದಾರೆ. ಹೀಗಿರುವಾಗ ಪ್ರವಾಹ ಸಂತ್ರಸ್ಥರ ಬಗ್ಗೆ ಮಾತನಾಡುವದನ್ನು ಬಿಟ್ಟಿದ್ದಾರೆ. ಅದನ್ನು ಬಿಟ್ಟು ಶಾಸಕರು ಬರ್ತಾರಂತೆ ಹೇಳ್ತಿದ್ದಾರೆ. ಇನ್ನು ಸಿಎಂ ವೈಮಾನಿಕ ಸಮೀಕ್ಷೆ ವಿಚಾರ ಅದರಿಂದ ಯಾವುದೇ ಪ್ರಯೋಜನ ಇಲ್ಲಾ. ಜನರ ಜೊತೆ ಮಾತನಾಡಿಲ್ಲಾ, ನೆರೆ ಪೀಡಿತ ಪ್ರದೇಶಗಳಿಗೆ ಹೋಗಿಲ್ಲಾ ಎಂದು ರಾಜಾಹುಲಿ ಸಿಎಂ ವಿರುದ್ದ ಗುಡುಗಿದ ಸಿದ್ದರಾಮಯ್ಯ, ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಡಿಸಿಎಂ ಅಶ್ವತ್ ನಾರಾಯಣ ಸಿದ್ದರಾಮಯ್ಯಗಿಂತ ಹೆಚ್ಚು ಹೆಚ್ಚು ದಮ್ ಇದೆ ಅಂತಾರೆ. ಅವರಿಗೆ ದಮ್ ಇದ್ರೆ ಪ್ರಧಾನಿ ಮೋದಿ ಮುಂದೆ ಕೂತು ಪರಿಹಾರ ತಗೆದುಕೊಂಡು ಬರಲಿ ಎಂದು ಸಿದ್ದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ರಾಜ್ಯದಲ್ಲಿ 25 ಸಂಸದರು ಇದ್ರು ಪ್ರಯೋಜನವಿಲ್ಲಾ. ಅಶ್ವತ್ ನಾರಯಣ್ ಗೆ ಹತ್ತು ಪಟ್ಟು ದಮ್ ಇರಲಿ, ಆದ್ರೆ ಪ್ರಧಾನಿ ಮೋದಿ ಬಳಿ ಹೋಗಿ ರಾಜ್ಯಕ್ಕೆ ಬರಬೇಕಾದ ಪರಿಹಾರ ತಗೆದುಕೊಂಡು ಬರಲಿ. ನೆರೆ ಸಂತ್ರಸ್ಥರಿಗೆ ಇನ್ನು ನಯಾ ಪೈಸೆ ಹಣ ನೀಡಿಲ್ಲಾ. ರಾಜ್ಯದ ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರ. ಈ ಹಿಂದೆ ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರು. ಇದೀಗ ಅವರ ಮಗ ಆರ್.ಟಿ.ಜಿ.ಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ನಾನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾತಿನುದ್ದಕ್ಕೂ ವಾಗ್ದಾಳಿ ನಡೆಸಿದ್ದಾರೆ.