ಕೂಗು ನಿಮ್ಮದು ಧ್ವನಿ ನಮ್ಮದು

ಕಡಿಮೆಯಾಯ್ತು ಮಳೆ ಅಬ್ಬರ.. ತಗ್ಗಿತು ಪ್ರವಾಹ ಭೀತಿ: ನಿಟ್ಟುಸಿರು ಬಿಡುತ್ತಿರೊ ವಿಜಯಪುರ ಜನತೆ

ವಿಜಯಪುರ: ಒಂದು ವಾರದಿಂದ ಭೀಮಾನದಿ ಆರ್ಭಟಕ್ಕೆ ತತ್ತರಿಸಿದ್ದ ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಜನ ಇದೀಗ ಕೊಂಚ ನಿರಾಳರಾಗಿದ್ದಾರೆ. ಪ್ರವಾಹದ ಹೊಡೆತಕ್ಕೆ ಸಿಲುಕಿದ್ದ ಜನರು ಮನೆಗೆ ಬರುತ್ತಿದ್ದಾರೆ. ಆದ್ರೆ ಮನೆಗೆ ಬಂದವರಿಗೆ ಮತ್ತೋಂದು ಆತಂಕ ಶುರುವಾಗಿದೆ. ಜಲಾವೃತವಾಗಿದ್ದ ಮನೆ ಕುಸಿಯುವ ಹಂತಕ್ಕೆ ಬಂದಿದ್ರೆ, ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಪರಿಹಾರದ ನೀರಿಕ್ಷೆಯಲ್ಲಿದ್ದಾರೆ‌. ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಭೀಮಾತೀರದಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡು ಬಂದಿದೆ. ಪ್ರವಾಹ ಪೀಡಿತ ಗ್ರಾಮಗಳ ಜನರಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ. ಮನೆಯೊಳಗೆ ನುಗ್ಗಿದ್ದ ನೀರು ಇಳಿಯುತ್ತಿದೆ. ಗ್ರಾಮದಲ್ಲಿದ್ದ ವೃತ್ತಗಳು ತೆರದುಕೊಳ್ಳುತ್ತಿವೆ.

ಪ್ರವಾಹದ ಹೊಡೆತಕ್ಕೆ ಸಿಲುಕಿದ್ದ ಜನರ ಮುಖದಲ್ಲಿ ನಿರಾಳ‌ ಭಾವ ಮೂಡಿದ್ದು, ಯಾವಾಗ ಪ್ರವಾಹ ಪೂರ್ತಿಯಾಗಿ ಕಡಿಮೆಯಾಗುತ್ತೆ ಅನ್ನೋ ಆಶಾಭಾವದಲ್ಲಿದ್ದಾರೆ. ಇಂದು ಬೆಳಿಗ್ಗೆಯಿಂದ ಪ್ರವಾಹದ ಆತಂಕ ಕಡಿಮೆಯಾಗಿದ್ದು, ಸಂಜೆ ಬಳಿಕ ಮತ್ತಷ್ಟು ಇಳಿಮುಖ ಕಂಡು ಬಂದರೆ ಮತ್ತೆ ಕಾಳಜಿ ಕೇಂದ್ರದಿಂದ ವಾಪಸ್ ಮನೆಗೆ ಹೋಗಬಹುದು ಎಂಬ ಭರವಸೆ ಹೊಂದಿದ್ದಾರೆ. ಇನ್ನು‌ ಪ್ರವಾಹದಿಂದಾಗಿ ಮನೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಮುಂದೆ ಹೇಗೆ ಅನ್ನೋ‌ ಚಿಂತೆ‌ ಸಂತ್ರಸ್ತರಿಗೆ ‌ಕಾಡುತ್ತಿದೆ. ಮಳೆಯಿಂದಾಗಿ ಬೆಳೆ ಸಂರ್ಪೂಣವಾಗಿ ಹಾನಿಯಾಗಿದ್ದು, ಮುಂದೆ ನಮ್ಮ‌ ಪರಿಸ್ಥಿತಿ ಹೇಗೆ ಅನ್ನೋ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಇದರ ಜೊತೆಗೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಪ್ರವಾಹದಿಂದಾಗಿ ಇಲ್ಲಿಯವರೆಗೆ 28 ಗ್ರಾಮಗಳು ಜಲಾವೃತವಾಗಿವೆ. ಇವುಗಳಲ್ಲಿ ಚಡಚಣ 8, ಇಂಡಿ 12, ಸಿಂದಗಿ ತಾಲೂಕಿನ 8 ಗ್ರಾಮಗಳು ಜಲಾವೃತವಾಗಿವೆ. 12,217 ಜನರನ್ನು ಸ್ಥಳಾಂತರ ಮಾಡಲಾಗಿದೆ.

ಇವರಲ್ಲಿ ಜಲಾವೃತದಲ್ಲಿ ಸಿಲುಕಿರುವ 1516 ಜನರನ್ನು ಎನ್ ಡಿಎಆರ್ ಎಫ್, ಆರ್ಮಿ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ರಕ್ಷಿಸಲಾಗಿದೆ. ಒಟ್ಟು 72,534 ಜನ ಜಲಾವೃತದಲ್ಲಿ ನಿರಾಶ್ರಿತರಾಗಿದ್ದಾರೆ. 8 ತಾಲೂಕು ಕೇಂದ್ರದ 2445 ಮನೆಗಳಿಗೆ ಹಾನಿಯಾಗಿವೆ. ಪ್ರವಾಹದಿಂದ ಸಿಲುಕಿ ನಿರಾಶ್ರಿತರಾದ ಸಂತ್ರಸ್ತರಿಗೆ ಒಟ್ಟು 39 ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಇದರ ಜೊತೆಗೆ ಬೆಳೆ ಹಾನಿಯಾಗಿದ್ದಕ್ಕೆ ಸರಿಯಾದ ಪರಿಹಾರ ದೊರೆಯದೆ ಇರುವುದು ಅನ್ನದಾತರ ಆಕ್ರೋಶಕ್ಕೆ‌‌‌ ಕಾರಣವಾಗಿದೆ. ನಮ್ಮ ಬೆಳೆ ಸಂಪೂರ್ಣ ಹಾಳಾಗಿದೆ. ನಮಗೆ ತಿನ್ನಲು ಏನೂ ಇಲ್ಲ. ಕೈಗೆ ಬಂದ ಬೆಳೆ ನೀರು ಪಾಲಾಗಿದೆ ಎಂದು ಕಣ್ಣಿರು ಹಾಕುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಪ್ರವಾಹ ಕಡಿಮೆಯಾಗಿದೆ. ಜನ ತಮ್ಮ ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಆದ್ರೆ ಮನೆಗಳು ಕುಸಿಯುವ ಆತಂಕ ಉಂಟಾಗಿದ್ದು, ಜಿಲ್ಲಾಡಳಿತ ಅವರಿಗೆ ಸೂಕ್ತ ಪರಿಹಾರ ನೀಡಿ ಮನೆ ನಿರ್ಮಾಣಕ್ಕೆ ಸಹಕಾರ ನೀಡಬೇಕಾಗಿದೆ.

error: Content is protected !!