ಕೂಗು ನಿಮ್ಮದು ಧ್ವನಿ ನಮ್ಮದು

ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ವಿದ್ಯುಕ್ತ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ದಸರಾಗೆ ಚಾಲನೆ ದೊರೆಯುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಸರಳಾತಿಸರಳವಾಗಿ ಈ ಬಾರಿಯ ದಸರಾ ಮಹೋತ್ಸವ ಆಚರಣೆಯಾಗುತ್ತಿದ್ದು, ಖ್ಯಾತ ಹೃದಯ ತಜ್ಞ ಡಾ.ಸಿ.ಎನ್‌ಮಂಜುನಾಥ್ ಅವರು ನಾಳೆ ಈ ಬಾರಿಯ ದಸರಾವನ್ನು ಉದ್ಘಾಟಿಸಲಿದ್ದಾರೆ. ನಾಳೆ ಬೆಳಿಗ್ಗೆ 7 ಗಂಟೆ 44 ನಿಮಿಷದಿಂದ 8 ಗಂಟೆ 15 ನಿಮಿಷದಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಹಾಗೂ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಇದಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ವೇದಿಕೆ ನಿರ್ಮಾಣದ ಅಂತಿಮ ಸಿದ್ದತಾ ಕಾರ್ಯ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅರಮನೆಯಲ್ಲಿ ಆನೆಗಳ ಯೋಗಕ್ಷೇಮ ವಿಚಾರಿಸಿ ಚಾಮುಂಡಿ ಬೆಟ್ಟದಲ್ಲಿ ಸಿದ್ದತೆ ಪರಿಶೀಲನೆ ನಡೆಸಿದ್ರು.

ನಾಳಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸುತ್ತಿದ್ದು ಇಂದು ಸಂಜೆಯೇ ಸಿಎಂ ಮೈಸೂರಿಗೆ ಆಗಮಿಸುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇವಲ 200 ಮಂದಿ ಪಾಲ್ಗೊಳ್ಳಲು ತಜ್ಞರ ಸಮಿತಿಯ ವರದಿಯಂತೆ ಸೀಮಿತ ಮಂದಿಯಷ್ಟೇ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಉದ್ಘಾಟನೆ ನಂತರ ಸಂಜೆ ಅರಮನೆ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, 50 ಮಂದಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ವಿದ್ಯುತ್ ದೀಪಾಲಂಕಾರದಿಂದ ಅರಮನೆ ನಗರಿ ಝಗಮಗಿಸುತ್ತಿದ್ದು, ಮೈಸೂರಿನ ಬೀದಿಗಳು ಕಂಗೊಳಿಸುತ್ತಿದ್ದು, ಲೈಟಿಂಗ್ಸ್ ಸಂಭ್ರಮಕ್ಕಷ್ಟೇ ದಸರಾ ಸೀಮಿತಗೊಂಡಿದೆ.

error: Content is protected !!