ಕೂಗು ನಿಮ್ಮದು ಧ್ವನಿ ನಮ್ಮದು

ಭಾರಿ ಮಳೆಗೆ ನಲುಗಿದ ವಿಜಯಪುರ, ಪ್ರವಾಹದ ಆತಂಕದಲ್ಲಿ ಗ್ರಾಮಗಳು: ಏಳು ಜನರ ರಕ್ಷಣೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರ ಮುಂದುವರೆದಿದೆ. ಭಾರಿ ಮಳೆಯಿಂದ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಿಂದಗಿ ತಾಲ್ಲೂಕಿನ ತಾರಾಪೂರ ಗ್ರಾಮ ಸಂಪೂರ್ಣ ಜಲಾವೃತ್ತವಾಗಿದೆ. ಹೀಗಿದ್ದರು ಗ್ರಾಮಸ್ಥರು ನೀರಲ್ಲೇ ನಡೆದುಕೊಂಡು ದನ-ಕರುಗಳನ್ನ ಸಾಗಿಸುತ್ತಿದ್ದಾರೆ. ಸುರಕ್ಷಿತ ಸ್ಥಳಗಳಿಗೆ ಜಾನುವಾರುಗಳನ್ನ ಗ್ರಾಮಸ್ಥರು ಒಯ್ಯುತ್ತಿದ್ದು, ನೀರಲ್ಲಿ ಈಜಿಕೊಂಡು ಗ್ರಾಮಸ್ಥರ ಜೊತೆಗೆ ಶ್ವಾನಗಳು ಕೂಡ ಹೊರ ಬರುತ್ತಿವೆ. ಇನ್ನು ವಿಜಯಪುರದ ಕೊನೆಯ ಹಳ್ಳಿ ದೇವಣಗಾಂವ ಗ್ರಾಮಕ್ಕೂ ಪ್ರವಾಹ ಸಂಕಷ್ಟ ಎದುರಾಗಿದೆ. ಭೀಮಾ ನದಿ ಪ್ರವಾಹದ ನೀರು ದೇವಣಗಾಂವ ಗ್ರಾಮಕ್ಕೆ ನುಗ್ಗಿದೆ. ಅಲ್ಲದೇ ಗ್ರಾಮದ ಆಂಜನೇಯ, ಅಂಬೀಗರ ಚೌಡಯ್ಯ ದೇಗುಲಗಳು ಜಲಾವೃತ್ತವಾಗಿವೆ.

ಗ್ರಾಮದ 25 ಕ್ಕೂ ಅಧಿಕ ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆ ದೇವಣಗಾಂವ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಇನ್ನು ಡೋಣಿ ನದಿಯ‌ ನಡುಗಡ್ಡೆಯಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಣೆ ಮಾಡಲಾಗಿದೆ. ತಾಳಿಕೋಟೆ ಪಟ್ಟಣದ ಬಳಿಯ ಡೋಣಿ‌ ನದಿಯ‌ ನಡುಗಡ್ಡೆಯಲ್ಲಿ ಸಿಲುಕಿದ್ದ ಮಹಾರಾಷ್ಟ್ರ ಮೂಲದ ಪತಿ, ಪತ್ನಿ ಹಾಗೂ ಐವರು ಮಕ್ಕಳು ಇದ್ದಿಲು ತಯಾರಿಸಲು ಆಗಮಿಸಿ ನಡುಗಡ್ಡೆಯಲ್ಲಿ ಸಿಲುಕಿದ್ದರು. ನದಿಯಲ್ಲಿ ಪ್ರವಾಹ ಬಂದ ನಂತರವೂ ಅಲ್ಲಿಯೇ ಉಳಿದುಕೊಂಡಿದ್ದರು. ಪ್ರವಾಹ ಭಯದಿಂದ ನಿನ್ನೆ ಸಾಯಂಕಾಲ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯಕ್ಕೆ ಮೊರೆ ಇಟ್ಟಾಗ, ಸ್ಥಳಕ್ಕೆ ಎಸಿ ಬಲರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಏಳು ಜನರನ್ನು ರಕ್ಷಿಸಿ ಕರೆ ತಂದಿದ್ದಾರೆ. ಪತಿ ಸಂತೋಷ, ಪತ್ನಿ ಸಂಗೀತಾ, ಮಕ್ಕಳಾದ ಕಿರಣ, ಕರೀನಾ, ಅಕ್ಷತಾ, ಅರ್ಜುನ, ಚರಣ್ ರಕ್ಷಣೆಗೊಳಗಾದ ಕುಟುಂಬಸ್ಥರು.

error: Content is protected !!