ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ಭಾರಿ ಮಳೆಯ ರಭಸಕ್ಕೆ ಕಲಬುರ್ಗಿಯ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಶಹಬಾದ್ ಪಟ್ಟಣದ ಬಳಿಯ ಹಳ್ಳದಲ್ಲಿ ಈ ಘಟನೆ ನಡೆದಿದ್ದು, ವಿಶ್ವನಾಥ್ (14) ಹಾಗೂ ಪೂರ್ಣಚಂದ್ರ ಜಾಯಿ(15) ಮೃತ ದುರ್ದೈವಿಗಳಾಗಿದ್ದಾರೆ. ಇಬ್ಬರೂ ಬಾಲಕರು ಶಹಾಬಾದ್ ನಿವಾಸಿಗಳಾಗಿದ್ದಾರೆ. ಇನ್ನು ಸತತ ಸುರಿದ ಭಾರಿ ಮಳೆಗೆ ಹಳೆ ಶಹಾಬಾದ್ ಗೆ ಹೊಂದಿಕೊಂಡಿರೋ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಹಳ್ಳಕ್ಕೆ ಹರಿದು ಬಂದಿದ್ದರಿಂದ ಹಳ್ಳ ತುಂಬಿ ಹರಿಯುತ್ತಿದೆ. ಇನ್ನು ಇಬ್ಬರೂ ಬಾಲಕರು ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರೋ ಚೆಕ್ ಡ್ಯಾಂ ದಾಟಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಹೀಗಾಗಿ ಬಾಲಕರು ಕಾಲು ಜಾರಿ ಹಳ್ಳದ ಪಾಲಾಗಿದ್ದಾರೆ. ಸಧ್ಯ ಇಬ್ಬರ ಶವಗಳನ್ನು ಸ್ಥಳಿಯರ ಸಹಾಯದಿಂದ ಹೊರತೆಗೆಯಲಾಗಿದ್ದು, ಘಟನಾ ಸ್ಥಳಕ್ಕೆ ಶಹಾಬಾದ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಶಹಾಬಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.