ಚಿಕ್ಕೋಡಿ: ಹೆತ್ತ ತಂದೆಯೇ ತನ್ನ ಮಗನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಕಲ್ಲು ಹಾಗೂ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದು, ಹಾರೂಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಅಲಗೌಡ ಚನ್ನಪ್ಪಾ ಅಂಜೂರೆ (38) ತಂದೆಯಿಂದ
ಕೊಲೆಯಾದ ಪುತ್ರನಾಗಿದ್ದು ತಂದೆ ಚನ್ನಪ್ಪಾ ಅಂಜುರೆ (80) ರ ವೃದ್ಧ ಹಂತಕನಾಗಿದ್ದಾನೆ. ತನ್ನ 6 ಎಕರೆ ಆಸ್ತಿ ವಿವಾದ ಹಾಗೂ ನಗದು ಹಣದ ವ್ಯವಹಾರದಲ್ಲಿ ತಂದೆ ಮಗನಿಗೆ ಮೇಲಿಂದ ಮೇಲೆ ವಾದ ವಿವಾದಗಳು ನಡೆಯುತ್ತಿದ್ದು, ಗ್ರಾಮದ ಪ್ರಮುಖರ ಸಮುಖದಲ್ಲಿ ರಾಜಿ ಪಂಚಾಯತಿ ನಡೆದಿತ್ತು. ಆದರೆ ಬುಧವಾರ ಬೆಳಗ್ಗಿನ 3 ಗಂಟೆಗೆ ಮಗ ಅಲಗೌಡ ಮಲಗಿದ್ದ ಸಂದರ್ಭದಲ್ಲಿ ತಂದೆ ಚನ್ನಪ್ಪ ಮಗನ ಮೇಲೆ ಕಲ್ಲು ಹಾಕಿ ಹಾಗೂ ಕೊಡಲಿಯಿಂದ ಕೊಚ್ಚಿದ್ದರಿಂದ ಸ್ಥಳದಲ್ಲಿಯೇ ಅಲಗೌಡ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಇನ್ನು ಕೊಲೆಯಾದ ಅಲಗೌಡನಿಗೆ ಇಬ್ಬರು ಹೆಂಡಿರಿದ್ದು ಇಬ್ಬರು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳಿದ್ದಾರೆ. ಘಟನಾ ಸ್ಥಳಕ್ಕೆ ಹಾರೂಗೇರಿ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿ ಚನ್ನಪ್ಪ ಅಂಜೂರೆ (80) ಆತನನ್ನು ಬಂಧಿಸಿ ತನಿಖೆಯನ್ನು ಕೈಗೊಂಡಿದ್ದಾರೆ.