ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ, ಮಹಾದಾಯಿ ಯೋಜನೆಗೆ ಗೋವಾ ಸರ್ಕಾರ ಮತ್ತೆ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದಿಂದ ಕಳಸಾ-ಬಂಡೂರಿ, ಮಹಾದಾಯಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಮಹದಾಯಿ ವಿಚಾರದಲ್ಲಿ ಗೋವಾ ಮತ್ತೆ ಕುತಂತ್ರ ನಡೆಸಿದೆ.
ಕರ್ನಾಟಕ ಸರ್ಕಾರದ ವಿರುದ್ಧ ಕೇಸ್ ದಾಖಲಿಸಲು ಗೋವಾ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇನ್ನೇನು ಮಹಾದಾಯಿ ಯೋಜನಾ ಕಾಮಗಾರಿ ಆರಂಭವಾಗಬಹುದು ಅಂತಿದ್ದ ರೈತಾಪಿ ವರ್ಗದ ಕೆಂಗಣ್ಣಿಗೆ ಗುರಿಯಾಗಿರುವ ಗೋವಾ ಸರ್ಕಾರ, ಕರ್ನಾಟಕ ಮಹದಾಯಿ ನೀರು ತಿರುಗಿಸಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲು ಮುಂದಾಗಿದೆ. ಗೋವಾ ಸರ್ಕಾರ ಮಹಾದಾಯಿ ವಿಚಾರದಲ್ಲಿ ಒಂದಿಲ್ಲೊಂದು ಕ್ಯಾತೆ ತೆಗಿಯುತ್ತಾ ಬರುತ್ತಿದೆ. ಸುಪ್ರೀಂ ಕೋರ್ಟನಲ್ಲಿ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂಧನೆ ಕೇಸ್ ದಾಖಲಿಸಲು ನಿರ್ಧಾರ ಮಾಡಿರುವ ವಿಚಾರವನ್ನು ಸ್ವತಃ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ ಸುದ್ದಿಗೋಷ್ಟಿ ನಡೆಸಿ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಮಧ್ಯದ ಮಹದಾಯಿ ವಿವಾದ, ಮಹದಾಯಿ ಯೋಜನೆಗೆ ಮತ್ತೆ ಗೋವಾ ಸರ್ಕಾರ ಅಡ್ಡುಗಾಲು ಹಾಕಲು ಕುತಂತ್ರ ರೂಪಿಸಿ ಯೋಜನೆಯನ್ನು ನೆನೆಗುದಿಗೆ ಕೆಡವುವುದೇ ಗೋವಾ ಉದ್ದೇಶವಾಗಿದೆ.