ಬೆಳಗಾವಿ: ಕೇಂದ್ರ ಸಚಿವ ದಿವಂಗತ ಸುರೇಶ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಬೇಕಿತ್ತು. ಆದರೆ ಈ ವಿಚಾರದಲ್ಲಿ ಏನೆಲ್ಲ ರಾಜಕೀಯ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಸುರೇಶ್ ಅಂಗಡಿ ಕುಟುಂಬಕ್ಕೆ ಬಿಜೆಪಿ ಹೇಗೆ ನ್ಯಾಯ ಒದಗಿಸಲಿದ್ದಾರೆ ಕಾದು ನೋಡೊಣ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದೆ. ಹೀಗಿರುವಾಗ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಸಾಧ್ಯವಾಗಿಲ್ಲ. ಅಲ್ಲದೇ ಅಂತ್ಯಕ್ರಿಯೆ ವೇಳೆ ಯಾವ ರೀತಿ ನಡೆದುಕೊಂಡ್ರು ನಿಮಗೆಲ್ಲ ಗೊತ್ತಿದೆ ಎಂದ ಡಿ.ಕೆ.ಶಿವಕುಮಾರ್, ಜನತೆ ಹಾಗೂ ಕುಟುಂಬಸ್ಥರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ. ಇನ್ನು ಯೋಗಿ ಸರ್ಕಾರ ದೊಡ್ಡ ರೋಗಿ ಸರ್ಕಾರ ಆಗಿದೆ. ಮನುಕುಲಕ್ಕೆ ಇದು ದೊಡ್ಡ ಅವಮಾನ ಆಗಿದೆ ಎಂದು ಡಿಕೆಶಿ ಗುಡುಗಿದ್ದಾರೆ. ಇನ್ನು ನೆರೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಜಿಲ್ಲೆಯ ನಾಯಕರಿಗೆ ಆಗಿಲ್ಲ. ಈ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ ಎಂದ ಡಿ.ಕೆ.ಶಿವಕುಮಾರ್, ಬೆಳಗಾವಿ ಲೋಕಸಭಾ ಉಪಚುನಾವಣೆ ವಿಚಾರ ಇಂದು ಸಂಜೆ ಈ ಬಗ್ಗೆ ಪ್ರಮುಖರ ಜೊತೆ ಚರ್ಚೆ ನಡೆಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.