ಮಡಿಕೇರಿ: ಕೊಡಗು ಜಿಲ್ಲೆಯಲ್ಲಿನ ಐತಿಹಾಸಿಕ ಸ್ಥಳಗಳಲ್ಲಿ ಇಲ್ಲಿನ ರಾಜರ ಗದ್ದುಗೆ ಕೂಡಾ ಒಂದು. ಶತಮಾನಗಳ ಹಿಂದೆ ಕೊಡಗು ರಾಜ್ಯವನ್ನಾಳಿದ ಅರಸರ ಸಮಾಧಿಗಳಿರುವ ಸ್ಥಳ ಪ್ರಮುಖ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ಆದ್ರೆ ಇದೀಗ ಐತಿಹಾಸಿಕ ಸ್ಥಳ ಕಾನೂನು ಸಮರದ ಕೇಂದ್ರವಾಗಿದೆ. ಗದ್ದುಗೆ ವ್ಯಾಪ್ತಿಯ ಎಕ್ರೆಗಟ್ಟಲೆ ಜಾಗ ಒತ್ತುವರಿಯಾಗಿದ್ದು, ಈ ಸಂಬಂಧ ಕೋರ್ಟ್ ಆದೇಶದ ಮೇರೆಗೆ ಜಿಲ್ಲಾಡಳಿತ ಸರ್ವೆ ಕಾರ್ಯ ನಡೆಸಲು ಮುಂದಾಗಿದೆ. ನೂರಾರು ವರ್ಷ ಹಳೆಯ ಕಟ್ಟಡ… ಸುಂದರವಾದ ಪರಿಸರ… ರಾಜರ ಆಳ್ವಿಕೆಗೆ ಸಾಕ್ಷಿಯಾಗಿರುವ ಸಮಾಧಿಗಳು… ಇದು ಕೊಡಗು ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿರುವ ರಾಜರ ಗದ್ದುಗೆಯ ಚಿತ್ರಣ.
ಮಹದೇವಪೇಟೆಯ ಅಂಚಿನಲ್ಲಿರುವ ಗದ್ದುಗೆ ಇಂದು ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ಮುನ್ನೂರು ವರ್ಷದ ಹಿಂದೆ ಕೊಡಗು ರಾಜ್ಯವನ್ನಾಳಿದ್ದ ಚಿಕ್ಕವೀರರಾಜೇಂದ್ರ, ಲಿಂಗರಾಜೇಂದ್ರ, ರಾಜಗುರು ರುದ್ರಮುನಿ, ಸೇನಾಧಿಕಾರಿಗಳಾದ ಬಿದ್ದಂಡ ಬೋಪು, ಬಿದ್ದಂಡ ಸೋಮಯ್ಯ ಅವರ ಸಮಾಧಿಗಳು ಇಲ್ಲಿದ್ದು, ಪುರಾತತ್ವ ಇಲಾಖೆ ಅವುಗಳ ನಿರ್ವಹಣೆ ಮಾಡ್ತಿದೆ. ಈಗಿನ ವಿಷ್ಯ ಏನಂದ್ರೆ, ಗದ್ದುಗೆ ವ್ಯಾಪ್ತಿಗೆ 19.80 ಎಕ್ರೆ ಜಾಗ ಒಳಪಟ್ಟಿದೆ. ಆದ್ರೆ ಸದ್ಯಕ್ಕೆ ಇರೋದು ಮಾತ್ರ ಮೂರು ಎಕ್ರೆ ಪ್ರದೇಶ ಮಾತ್ರ. ಉಳಿದವೆಲ್ಲ ಒತ್ತುವರಿಯಾಗಿದ್ದು, ಈ ಸಂಬಂಧ ಅಖಿಲ ಭಾರತ ವೀರಶೈವ ಮಹಾಸಭಾ ಕಾನೂನು ಹೋರಾಟ ಮಾಡುತ್ತಿದೆ.
ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ಹಾಕಿದ್ದು, ಈ ಸಂಬಂಧ ಸರ್ವೆ ಕಾರ್ಯ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಗದ್ದಿಗೆ ಹಿಂಭಾಗದ ಪ್ರದೇಶದಲ್ಲಿ ಹಲವರು ಒತ್ತುವರಿ ಮಾಡಿಕೊಂಡು ಮನೆಗಳನ್ನ ನಿರ್ಮಿಸಿಕೊಂಡಿದ್ದಾರೆ ಅನ್ನೋ ಆರೋಪ ಇದೆ. ಒತ್ತುವರಿ ಮಾಡಿಕೊಂಡಿರುವ ಪ್ರದೇಶವನ್ನು ತೆರವು ಮಾಡಿ ಐತಿಹಾಸಿಕ ಗದ್ದುಗೆ ಸ್ವಾಮ್ಯಕ್ಕೆ ಪಡೆಯಬೇಕು ಅನ್ನೋದು ಅರ್ಜಿದಾರರ ವಾದ. ಈ ಸಂಬಂಧವಾಗಿ ಕೋರ್ಟ್ ಸೂಚನೆ ಮೇರೆಗೆ ಇವತ್ತು ಮಡಿಕೇರಿ ತಹಸೀಲ್ದಾರ್ ಮಹೇಶ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಸಲು ನಿರ್ಧರಿಸಲಾಗಿತ್ತು. ಆದ್ರೆ ಸರ್ವೆ ಕಾರ್ಯಕ್ಕೆ ಅಲ್ಲಿನ ನಿವಾಸಿಗಳು ಹಾಗೂ ಅವರ ಪರ ವಕೀಲರು ಆಕ್ಷೇಪಿಸಿದ್ರು.
ಸರ್ವೆ ಮಾಡುವ ಬಗ್ಗೆ ನಿವಾಸಿಗಳಿಗೆ ನೋಟಿಸ್ ನೀಡಿಲ್ಲ. ಜತೆಗೆ ಕೇವಲ ಒಂದಷ್ಟು ಜನರನ್ನ ಮಾತ್ರ ಟಾರ್ಗೆಟ್ ಮಾಡಿ ಸರ್ವೆ ಮಾಡಲಾಗ್ತಿದೆ. ಸಂಪೂರ್ಣ ಜಾಗದ ಗಡಿ ಗುರುತು ಮಾಡಿ, ಸಮಗ್ರವಾಗಿ ಸರ್ವೆ ನಡೆಸ್ಬೇಕು ಅಂತ ಆಗ್ರಹಿಸಿದರು. ಹೀಗಾಗಿ ಬಂದ ದಾರಿಗೆ ಸರ್ವೆ ಅಧಿಕಾರಿಗಳು ವಾಪಸ್ ಹೋದ್ರು. ಒಟ್ನಲ್ಲಿ ಸ್ಥಳೀಯ ಆಡಳಿತ ವರ್ಗ, ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಇಂದು ಪುರಾತನ ಸ್ಮಾರಕದ ಜಾಗ ಒತ್ತುವರಿಯಾಗಿ, ಮನೆಗಳು ನಿರ್ಮಾಣವಾಗಿದೆ. ಈ ಬಗ್ಗೆ ನ್ಯಾಯಾಲಯ ಮುಂದಿನ ದಿನದಲ್ಲಿ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತೆ ಅನ್ನೋದು ಸದ್ಯದ ಪ್ರಶ್ನೆ.