ಹಾವೇರಿ: ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ಬಂದ್ ಕರೆ ಹಿನ್ನೆಲೆ, ಹಾವೇರಿಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಜನಜೀವನ ಹಾಗೂ ಸಾರಿಗೆ ಬಸ್, ಆಟೋಗಳ ಸಂಚಾರ ಕಂಡು ಬಂದಿದ್ದು, ಕೆಲ ಅಂಗಡಿ, ಮುಂಗಟ್ಟುಗಳು ತೆರೆದಿದ್ದವು. ಇನ್ನೂ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರವೇ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಅರೇಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ರೈತರು, ನೇಣು ಬೀಗಿದುಕೊಂಡು ಆತ್ಮಹತ್ಯೆಯ ಅಣಕು ಪ್ರದರ್ಶನ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ, ಬಾಯಿ ಬಡೆದುಕೊಂಡು, ತಮಟೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ನಗರದ ಬೀದಿಗಳಲ್ಲಿ ಎತ್ತಿನ ಬಂಡಿ ತೆಗೆದುಕೊಂಡು, ಮೆರವಣಿಗೆ ನಡೆಸಿದರು. ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಮರಣ ಶಾಸನಗಳಾಗಿವೆ. ಇದು ಬಂಡವಾಳ ಶಾಹಿಗಳನ್ನು ರೈತರನ್ನಾಗಿಸಿ, ರೈತರನ್ನು ಜೀತದಾಳಾಗಿಸುವ ಹುನ್ನಾರವಾಗಿದೆ. ಸರಕಾರ ಈ ಬಗ್ಗೆ ಎಚ್ಚೆತ್ತುಕೊಂಡು, ಈ ಮರಣ ಶಾಸನಗಳನ್ನು ಕೈ ಬಿಡಬೇಕು. ರೈತ ಪರ ಯೋಜನೆ ರೂಪಿಸಬೇಕು, ಇಲ್ಲವಾದರೆ ಪ್ರತಿ ಹಳ್ಳಿ, ಹಳ್ಳಿಯಲ್ಲೂ ಚಳುವಳಿ ಪ್ರಾರಂಭಿಸಲಾಗುತ್ತದೆಂದು ಪ್ರತಿಭಟನಾ ನಿರತರು ಸರಕಾರಕ್ಕೆ ಎಚ್ಚರಿಕೆ ನೀಡಿದರು.