ಬೆಳಗಾವಿ: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ಬಂದ್ ಆಗಿದ್ದ ಸಾರಿಗೆ ಸಂಚಾರ ಇದೀಗ ಆರಂಭವಾಗಿದೆ. ಬೆಳಿಗ್ಗೆಯಿಂದ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದು, ಬಸ್ ಸಂಚಾರ ಆರಂಭವಾಗಿದ್ದರಿಂದ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಆಗಿದ್ದ ಬಸ್ ಸಂಚಾರ ಇದೀದ ಪೊಲೀಸ್ ಬೆಂಗಾವಲಿನಲ್ಲಿ ಆರಂಭವಾಗಿದ್ದು, ಕಿಡಿಗೇಡಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇನ್ನು ಬೆಳಿಗ್ಗೆ ಕೇಂದ್ರ ಬಸ್ ನಿಲ್ದಾಣದ ಎದುರು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಸಿ ಸಿಬ್ಬಂದಿಗೆ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳಲಾಯಿತು. ಉಳಿದಂತೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಜನ ಜೀವನ ಎಂದಿನಂತೆ ಸಾಮಾನ್ಯವಾಗಿದೆ. ಜಿಲ್ಲೆಯಾದ್ಯಂತ ಬಸ್ ಸಂಚಾರ ಆರಂಭವಾಗಿದೆ. ಬೆಳಗಾವಿ ನಗರದಲ್ಲಿ ಅಟೋ ಸಂಚಾರ, ಖಾಸಗಿ ವಾಹನಗಳ ಸಂಚಾರ ಸೇರಿದಂತೆ ಹೊಟೇಲ್, ಅಂಗಡಿ ಮುಂಗಟ್ಟುಗಳು ಎಂದಿನಂತೆ ತಮ್ಮ ಕಾರ್ಯಾರಂಭ ಮಾಡಿವೆ.
ಇನ್ನು ಹನ್ನೊಂದು ಗಂಟೆಯ ನಂತರ ರೈತ ಸಂಘಟನೆ, ವಿವಿಧ ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ನಗರದ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿವೆ. ಚನ್ನಮ್ಮ ವೃತ್ತದಿಂದ ಸುವರ್ಣ ವಿಧಾನ ಸೌಧದ ವರೆಗೆ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲಿದ್ದಾರೆ. ಇನ್ನು ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಸಿದರೇ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಿದೆ.