ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಕೂಡಾ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮೋಡ ಕವಿದ ವಾತಾವರಣ ಇದ್ದು, ಇನ್ನೆರಡು ದಿನ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟ ಪ್ರಕಾರ ಅರಬ್ಬಿ ಸಮುದ್ರದ ತೀರದ ತಾಲೂಕುಗಳಲ್ಲಿ ಗಾಳಿ ಸಹಿತ ಮಳೆ ಬೀಳುತ್ತಿದೆ.
ಕಳೆದ 24 ಗಂಟೆಯ ಮಳೆ ಲೆಕ್ಕಾಚಾರವನ್ನು ನೋಡುವುದಾದರೆ. ಉಡುಪಿ ಜಿಲ್ಲೆಯಲ್ಲಿ 89 ಮಿಲಿಮೀಟರ್ ಸರಾಸರಿ ಮಳೆ ಬಿದ್ದಿದೆ. ಉಡುಪಿ ತಾಲೂಕಿನಲ್ಲಿ 82, ಕುಂದಾಪುರ 108 , ಕಾರ್ಕಳ ತಾಲೂಕಿನಲ್ಲಿ 76 ಮಿಲಿಮೀಟರ್ ಮಳೆ ಬಿದ್ದಿದೆ. ಕುಂದಾಪುರ ತಾಲ್ಲೂಕಿನ ಬಳ್ಕೂರು ಗ್ರಾಮದ ವ್ಯಾಪ್ತಿಯಲ್ಲಿ 111 ಮಿಲಿಮೀಟರ್ ಮಳೆಯಾಗಿದೆ. ಭಾನುವಾರ ಕೂಡ ಆರೆಂಜ್ ಅಲರ್ಟ್ ಮುಂದುವರಿಯಲಿದೆ.
ಸೋಮವಾರ ಎಲ್ಲೋ ಅಲರ್ಟ್ ಇದ್ದು, ಸುಮಾರು 60 ರಿಂದ 110 ಮಿಲಿಮೀಟರ್ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳಿರುವ ಬೋಟುಗಳು ತಮ್ಮ ಕಸುಬನ್ನು ಮುಂದುವರಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಫಿಶಿಂಗ್ ನಡೆಸುತ್ತಿದೆ ಎಂಬ ಮಾಹಿತಿ ಇದೆ. ಜಿಲ್ಲೆಯಾದ್ಯಂತ ವಾತಾವರಣ ಸಂಪೂರ್ಣ ತಂಪಿನಿಂದ ಕೂಡಿದೆ. ಜೂನ್, ಜುಲೈ ತಿಂಗಳಲ್ಲಿ ಭಿತ್ತನೆ, ನಾಟಿಮಾಡಿದ ಬೇಸಾಯಗಾರರು ಕೊಂಚ ಗೊಂದಲದಲ್ಲಿದ್ದಾರೆ. ಮಳೆ ಮುಂದುವರಿದರೆ ಭತ್ತದ ಹೂವಿನಲ್ಲಿ ನೀರು ನಿಂತರೆ ತೆನೆ ಕೊಳೆಯುವ ಸಾಧ್ಯತೆ ಇದೆ ಎಂದು ರೈತರು ಆತಂಕಗೊಂಡಿದ್ದಾರೆ.