ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಬೆಳಗಾವಿ ಲೋಕಸಭಾ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಯುವಂತೆ ಕಾಣುತ್ತಿಲ್ಲ. ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡುವ ಸುದ್ದಿ ಹೊರಬಿದ್ದಾಗಿನಿಂದ ಹಿಡಿದು ಇಂದಿನವರೆಗೂ ಬೆಳಗಾವಿ ಬಿಜೆಪಿಯಲ್ಲಿ ಅಂಗಡಿ ಕುಟುಂಬ ಮತ್ತು ಶೆಟ್ಟರ್ ವಿರೋಧಿ ಅಲೇ ದಿನೆ ದಿನೆ ಹೆಚ್ಚಾಗುತ್ತಿದೆ.
ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ಗೋ ಬ್ಯಾಕ್ ಶೆಟ್ಟರ್ ಅಭಿಯಾನಕ್ಕೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜನ ಬೆಂಬಲ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ಬೆಳಗಾವಿ ಲೋಕಸಭಾ ಕ್ಷೇತ್ರದ ಅನೇಕ ಶಾಸಕರು ಮತ್ತು ಪ್ರಮುಖ ಕಾರ್ಯಕರ್ತರು ಚುನಾವಣೆ ಕಾರ್ಯದಿಂದ ದೂರ ಉಳಿಯುವ ಚಿಂತನೆ ನಡೆಸಿದ್ದು, ಅಂಗಡಿ ಕುಟುಂಬದ ವಿರುದ್ದ ಕಿಡಿಕಾರುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಂಗಡಿ ಕುಟುಂಬ ಮತ್ತು ಜಗದೀಶ್ ಶೆಟ್ಟರ್ ವಿರೋಧಿ ಸಂದೇಶಗಳು ಜೋರಾಗಿ ಸದ್ದು ಮಾಡುತ್ತಿವೆ. ಶೆಟ್ಟರ್ ಅಧಿಕಾರದಲ್ಲದ್ದಷ್ಟೂ ಕಾಲ ಬೆಳಗಾವಿಗೆ ಏನೂ ಅನುಕೂಲ ಮಾಡಿಲ್ಲ. ಅವರು ಮಾಡಿದ್ದು ಕೇವಲ ದ್ರೋಹವೇ ವಿನಃ ಯಾವುದೇ ಲಾಭವಾಗಿಲ್ಲ. ಬೆಳಗಾವಿಯ ಹೋರಾಟಗಾರರ ಸತತ ಪ್ರಯತ್ನದಿಂದ ಬೆಳಗಾವಿಗೆ ಬಂದಿದ್ದ, ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಬೇಕಿದ್ದ ಹಲವು ಸರ್ಕಾರಿ ಕಚೇರಿಗಳನ್ನು ಮತ್ತು ಹಲವು ಯೋಜನೆಗಳನ್ನು ಹುಬ್ಬಳ್ಳಿ-ಧಾರವಾಡಕ್ಕೆ ಸ್ಥಳಾಂತರ ಮಾಡಿದ್ದೇ ಜಗದೀಶ್ ಶೆಟ್ಟರ್ ದೊಡ್ಡ ಸಾಧನೆಯಾಗಿದೆ.
ಬೆಳಗಾವಿಯಲ್ಲಿ ನಡೆಯಬೇಕಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶವನ್ನೂ ಬೆಳಗಾವಿಯಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಿ ಅನ್ಯಾಯ ಮಾಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಸಾಗಿಸಿ ಬೆಳಗಾವಿ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಖುದ್ದು ಬೆಳಗಾವಿ ಬಿಜೆಪಿಗರೇ ಪೋಸ್ಟ್ ಮಾಡುತ್ತಿದ್ದು, ಈ ಚುನಾವಣೆಯಲ್ಲಿ ಸ್ವಪಕ್ಷ ಬಿಜೆಯಿಯಲ್ಲೇ ಜಗದೀಶ್ ಶೆಟ್ಟರ್ ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವು ಕಾಂಗ್ರೆಸ್ ಹಾದಿ ಬಹುತೇಕ ಸುಗಮವಾಗುತ್ತಿದೆ.