ಪತ್ನಿ ಹತ್ಯೆಗೈದು ತಾನೂ ನೇಣಿಗೆ ಕೊರಳೊಡ್ಡಿದ ಪತಿ, ಹಾಸನದಲ್ಲಿ ನಡೆದ ಭೀಕರ ಘಟನೆ.
ಹಾಸನ: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ನಗರದ ಕೆ.ಹೊಸಕೊಪ್ಪಲಿನಲ್ಲಿ ವರದಿಯಾಗಿದೆ.
ದೇವರಾಜು (43), ಮಂಜುಳಾ 35) ಮೃತ ದಂಪತಿಗಳಾಗಿದ್ದಾರೆ. ಮೃತ ದಂಪತಿಗಳು ಹೊಳೆನರಸೀಪುರ ತಾಲ್ಲೂಕು ಮೂಲದವರಾಗಿದ್ದು, ಕಳೆದ ಮೂರು ತಿಂಗಳಿನಿಂದ ಕೆ.ಹೊಸಕೊಪ್ಪಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಈ ದಂಪತಿ, ಇದಕ್ಕೂ ಮೊದಲು ಬೆಂಗಳೂರಿನಲ್ಲಿ ವಾಸವಿದ್ದರು. ಮೃತ ದೇವರಾಜು ಮತ್ತು ಮಂಜುಳ ಕಳೆದ ಸೋಮವಾರದಿಂದ ಮನೆಯಿಂದ ಹೊರಬಂದಿರಲ್ಲಾ ಎನ್ನಲಾಗಿದ್ದು, ಇಂದು ಮನೆಯಿಂದ ದುರ್ವಾಸನೆ ಬಂದಾಗ ಮನೆಯ ಮಾಲಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಬೀಗ ಒಡೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿದ್ದ ದೇವರಾಜು ಶವ ಮತ್ತು ಮಂಚದ ಮೇಲೆ ಇರುವ ಮಂಜುಳಾ ಮೃತದೇಹ ಪತ್ತೆಯಾಗಿದೆ.
ಸೋಮವಾರವೇ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಇಬ್ಬರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದವು. ದೇವರಾಜು, ಮಂಜುಳ ಕಳೆದ ಹದಿನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು ಎನ್ನಲಾಗಿದ್ದು, ದೇವರಾಜು ಹೊಳೆನರಸೀಪುರ ತಾಲ್ಲೂಕಿನ, ಕೆರಗೋಡು ಗ್ರಾಮದವನು ಮತ್ತು ಮಂಜುಳಾ ಹೊಳೆನರಸೀಪುರ ತಾಲ್ಲೂಕಿನ, ಗೋಪನಹಳ್ಳಿ ಗ್ರಾಮದವರು ಎನ್ನಲಾಗಿದೆ.
ಘಟನಾ ಬಡಾವಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.