ಗದಗ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿ ಮೂವರು ದುರ್ಮರಣಕ್ಕಿಡಾಗಿದ್ದು, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಸಾವಿಗಿಡಾಗಿದ್ದಾರೆ. ಇನ್ನೂ ಮೂವರಿಗೆ ಗಾಯಗಳಾಗಿದ್ದು, ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ.
ಮೃತರನ್ನು ನವೀನ್ ಕುಂಬಾರ್ (23), ನಾಗಪ್ಪ ಕಾಳಿ (23), ಗಂಗಪ್ಪ ಅಕ್ಕಿ (22) ಎಂದು ಗುರುತಿಸಲಾಗಿದ್ದು, ಗಾಯಾಳುಗಳಿಗೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದವರಾಗಿದ್ದು, ಕುಂದಗೋಳದಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.