ಧಾರವಾಡ: ಮಗನೊಬ್ಬ ಹೆತ್ತ ತಾಯಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಹೊಸಯಲ್ಲಾಪೂರ ಉಡುಪಿ ನಗರದಲ್ಲಿ ಈ ಘಟನೆ ನಡೆದಿದ್ದು, ಶಾರದಾ ಭಜಂತ್ರಿ (60) ಕೊಲೆಯಾದ ದುರ್ದೈವಿ ತಾಯಿಯಾಗಿದ್ದಾಳೆ. ಇನ್ನು ಮಗ ರಾಜೇಂದ್ರ ಭಜಂತ್ರಿ (40) ರಾಡ್ ನಿಂದ ಹೊಡೆದು ತಾಯಿಯನ್ನು ಕೊಲೆ ಮಾಡಿ ಬಳಿಕ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಇನ್ನು ಮಗ ರಾಜೇಂದ್ರ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದ ಮತ್ತು ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ತಾಯಿಗೆ ಬರುತ್ತಿದ್ದ ಪಿಂಚಣಿ ಮೇಲೆ ಮಗನ ಕಣ್ಣು ಹಾಕುತ್ತಿದ್ದ. ಅಲ್ಲದೇ ತಾಯಿ ಹೆಸರಲ್ಲಿದ್ದ ಖಾಲಿ ಜಾಗ ತನಗೆ ಕೊಡುವಂತೆ ಒತ್ತಾಯಿಸಿ, ಅಲ್ಲಿ ಮನೆ ಕಟ್ಟಿಸಿಕೊಳ್ಳೋದಾಗಿ ದುಂಬಾಲು ಬಿದ್ದಿದ್ದ ಎನ್ನಲಾಗಿದೆ.
ತಾಯಿ ಜಾಗ ಕೊಡಲು ನಿರಾಕರಿಸಿದ್ದಕ್ಕೆ ತಾಯಿ-ಮಗನ ಮಧ್ಯೆ ಜಗಳವಾಗಿ, ಆಸ್ತಿ ಜಗಳ ಕೊಲೆ, ಆತ್ಮಹತ್ಯೆಯಲ್ಲಿ ಅಂತ್ಯ ಕಂಡಿದೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.