ಮಂಡ್ಯ: ಚಂದ್ರಯಾನ – 3 ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಸೋಮನಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಹೈಟನ್ ಫಾಸ್ಟನರ್ ಪ್ರೈ ಲಿ ವತಿಯಿಂದ ಶುಭ ಕೋರಲಾಯಿತು.
ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಹೈಟನ್ ಫಾಸ್ಟನರ್ ಪ್ರೈ ಲಿ ವತಿಯಿಂದ ಶುಕ್ರವಾರ ಇತರೇ ಕಾರ್ಖಾನೆಗಳ ಅಂದಾಜು 5 ಸಾವಿರ ಮಂದಿ ನೌಕರರು ಹಾಗೂ ಕಾರ್ಮಿಕರಿಗೆ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು.
ಇದೇ ವೇಳೆ ಕಾರ್ಖಾನೆಯ ಅಧಿಕಾರಿ ಧರಣೇಂದ್ರ ಕುಮಾರ್ ಮಾತನಾಡಿ, ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಇಳಿದಿರುವುದು ಐತಿಹಾಸಿಕ ಸಾಧನೆಯಾಗಿದೆ. ಇಡೀ ಜಗತ್ತು ಭಾರತದ ಕಡೆಗೆ ತಿರುಗಿ ನೋಡುವಂತಾಗಿದೆ. ಚಂದ್ರನ ಅಂಗಳ ತಲುಪಿದ ವಿಶ್ವದ 4 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರೂ ಸೇರಿದೆ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ. ಭಾರತ ವಿಜ್ಞಾನ – ತಂತ್ರಜ್ಞಾನದಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಚಂದ್ರಯಾನ – 3 ಯಶಸ್ಸಿನಿಂದ ನಿರೂಪಿಸಿದೆ ಎಂದು ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಬಣ್ಣಿಸಿದರು.
ಇದೇ ವೇಳೆ ಅಖಿಲೇಶ್, ರಾಜೇಶ್, ಪ್ರವೀಣ್ ಕುಮಾರ್, ಶಂಕರ್ ಮೂರ್ತಿ, ಪ್ರದೀಪ್, ನವೀನ್, ಜಯರಾಂ, ಮಹೇಶ್ ಮತ್ತಿತರರು ಇದ್ದರು.