ಬೆಂಗಳೂರು: ಕೇರಳದಲ್ಲಿ ಜ್ವರದ ಕೇಸ್ಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲೂ ಆತಂಕ ಮೂಡಿದೆ. ಕೇರಳದಲ್ಲಿ ಪ್ರತಿನಿತ್ಯ 10 ಸಾವಿರ ಜ್ವರದ ಕೇಸ್ ದಾಖಲಾಗುತ್ತಿದ್ದು, ಕಳೆದ 20 ದಿನಗಳಲ್ಲಿ 1,48,362 ಜ್ವರದ ಕೇಸ್ ದಾಖಲಾಗಿದೆ. ಈ ಮಧ್ಯೆ ಮಳೆಗಾಲ ಶುರುವಾಗುತ್ತಿದ್ದು, ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆತಂಕ ಎದುರಾಗಿದೆ. ರಾಜ್ಯದ ಅಂಕಿ ಅಂಶ ನೋಡುವುದಾದರೆ ಕಳೆದ 27 ದಿನಗಳಲ್ಲಿ 334 ಡೆಂಗ್ಯೂ ಜ್ವರದ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 2,000 ಗಡಿ ದಾಟಿದೆ.
ಡೆಂಗ್ಯೂ ಜತೆ ಚಿಕನ್ಗುನ್ಯಾ ಕೇಸ್ಗಳ ಸಂಖ್ಯೆ ಕೊಂಚ ಏರಿಕೆ
ಹೌದು ಈಗಾಗಲೇ ಕೊರೊನಾ ಮಾಹಾಮಾರಿಗೆ ತತ್ತರಿಸಿದ್ದು, ಇದೀಗ ಡೆಂಗ್ಯೂ ಜತೆ ಚಿಕನ್ಗುನ್ಯಾ ಪ್ರಕರಣಗಳ ಸಂಖ್ಯೆ ಕಳೆದ ಎರಡು ವಾರಗಳಿಂದ ಕೊಂಚ ಹೆಚ್ಚಳವಾಗಿದೆ. ಜನವರಿಯಿಂದ ನಿನ್ನೆಯವರೆಗೆ 2,180 ಡೆಂಗ್ಯೂ ಕೇಸ್ಗಳು ಪತ್ತೆಯಾಗಿದ್ದು, ಬರೊಬ್ಬರಿ 77,260 ರಕ್ತದ ಮಾದರಿಯನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕುರಿತು ಜನರಿಗೆ ಆರೋಗ್ಯದ ಬಗ್ಗೆ ಎಚ್ಚರವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಷ್ಟೇ 732 ಕೇಸ್
ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 2180 ಡೆಂಗ್ಯೂ ಕೇಸ್ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಅಷ್ಟೇ 732 ಕೇಸ್ ಬೆಳಕಿಗೆ ಬಂದಿದೆ. ಇನ್ನುಳಿದಂತೆ 77260 ಬ್ಲಡ್ ಸ್ಯಾಂಪಲ್ಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು 534 ಚಿಕನ್ ಗುನ್ಯಾ ಕೇಸ್ ಸೇರಿದಂತೆ 84ಮಲೇರಿಯಾ ಪ್ರಕರಣ ಪತ್ತೆಯಾಗಿದೆ. ಇದೀಗ ಮಳೆಗಾಲ ಶುರುವಾಗುತ್ತಿದ್ದು, ವಾತಾವರಣ ಬದಲಾವಣೆಯಿಂದ ಮತ್ತಷ್ಟು ಕೇಸ್ ಹೆಚ್ಚುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಮುಂಜಾಗೃತ ಕ್ರಮವಹಿಸಲು ಈಗಾಗಲೇ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.