ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು ಮತ್ತು ರಾಜ್ಯದ ಜನರಿಗೆ ಐದು ಭರವಸೆಗಳನ್ನು ಘೋಷಿಸಿದ್ದಾರೆ. ಅವರು ಜಬಲ್ಪುರ ಜಿಲ್ಲೆಯಲ್ಲಿ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಐದು ಖಾತರಿಗಳ ಕುರಿತು ಮಾತನಾಡಿದ ಗಾಂಧಿ, ರಾಜ್ಯದ ಪ್ರತಿ ಮಹಿಳೆಗೆ ಮಾಸಿಕ 1,500 ರೂ. ಸಹಾಯಧನ , ಪ್ರತಿ ಮನೆಗೆ 500 ರೂಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್, 100 ಯೂನಿಟ್ ವಿದ್ಯುತ್ ಉಚಿತ ಮತ್ತು 200 ಯೂನಿಟ್ ಅರ್ಧ ದರದಲ್ಲಿ ನೀಡಲಾಗುವುದು . ರೈತರ ಸಾಲ ಮನ್ನಾ ಮಾಡಿ ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲಾಗುವುದು ಎನ್ನುವ ಭರವಸೆ ನೀಡಿದ್ದಾರೆ.
ಬಿಜೆಪಿಯು ಮಾತನಾಡುತ್ತದೆ ಆದರೆ ಯಾವುದೇ ಭರವಸೆಗಳನ್ನು ಈಡೇರಿಸುವುದಿಲ್ಲ, ಮಾತನಾಡುವ ಬದಲು ಕೆಲಸ ಮಾಡಿ ತೋರಿಸಬೇಕು ಎಂದರು. ನಮ್ಮ ಪಕ್ಷ ಏನೇ ಭರವಸೆ ನೀಡಿದ್ದರೂ ಛತ್ತೀಸ್ಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ಈಡೇರಿಸಿದ್ದೇವೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸ್ಥಿತಿ ನೋಡಿ ನಿಮಗೆ ಅರಿವಾಗುತ್ತದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಬಹಳಷ್ಟು ಕೆಲಸ ಮತ್ತು ಅಭಿವೃದ್ಧಿ ಮಾಡಲಾಗಿದೆ, ಎಂದು ಅವರು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು, ಆದರೆ ಬಳಿಕ ನಮ್ಮ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ರಚಿಸಿತ್ತು. ರಾಜ್ಯದಲ್ಲಿ ಭಾರಿ ಹಣದುಬ್ಬರವಿದೆ, ಎಲ್ಪಿಜಿ ಸಿಲಿಂಡರ್, ಡೀಸೆಲ್ ಮತ್ತು ಪೆಟ್ರೋಲ್ ದುಬಾರಿಯಾಗಿದೆ.ಕರ್ನಾಟಕ ಚುನಾವಣೆಯ ಸಮಯದಲ್ಲಿ ಐದು ಭರವಸೆಗಳನ್ನು ನೀಡಲಾಯಿತು ಮತ್ತು ಸರ್ಕಾರ ರಚನೆಯ ನಂತರ ಎಲ್ಲಾ ಐದು ಭರವಸೆಗಳನ್ನು ಸಂಪುಟದಲ್ಲಿ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು. ಪ್ರಿಯಾಂಕಾ ಗಾಂಧಿ, ನಾನು ಇಲ್ಲಿ ಮತ ಕೇಳಲು ಬಂದಿಲ್ಲ, ಜನರನ್ನು ಎಬ್ಬಿಸಲು ಬಂದಿದ್ದೇನೆ ಎಂದು ಹೇಳಿದರು