ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಶುರು: ಪ್ರತಿ ಹುದ್ದೆಗೂ ರೇಟ್ ಫಿಕ್ಸ್: ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ದಂಧೆ ಶುರುವಾಗಿದ್ದು, ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ. ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ವಿವಿಧ ಜಿಲ್ಲೆಗಳ ಮುಖಂಡರ ಆತ್ಮಾವಲೋಕನ ಸಭೆಯ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಹಿಂದಿನ ಬಿಜೆಪಿ ಸರಕಾರವನ್ನು ಟೀಕೆ ಮಾಡುತ್ತಿದ್ದ ಇದೇ ಕಾಂಗ್ರೆಸ್ ನಾಯಕರು ಈಗ ಪ್ರತಿ ಹುದ್ದೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳ ಬಗ್ಗೆ ಇವರೇ ಪೇ ಸಿಎಂ ಎಂದು ಪ್ರಚಾರ ಮಾಡಿದರು. ಆದರೆ, ಅದಕ್ಕಿಂತ ಜಾಸ್ತಿ ಈ ಸರಕಾರ ನಡೆಸುತ್ತಿದೆ. ಇದನ್ನು ಎಷ್ಟು ಪರ್ಸೆಂಟ್ ಸರಕಾರ ಎಂದು ಕರೆಯಬೇಕು? ಎಂದು ಎಚ್‌ಡಿ ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಸಿಎಂ ಪ್ರಚಾರ ನಡೆಸಿದ್ದ ಇವರ ಬಗ್ಗೆಯೂ ನಾವು ಹಾದಿಬೀದಿಯಲ್ಲಿ ಪ್ರಚಾರ ನಡೆಸಬೇಕಿದೆ. ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಬೇಕಿದೆ. ಸ್ವತಃ ಅಧಿಕಾರಿಗಳಲ್ಲೇ ರೇಟ್ ಫಿಕ್ಸ್ ಆಗಿದೆ ಅಂತ ಮಾತಾಡ್ತಾ ಇದ್ದಾರೆ ಎಂದು ದೂರಿದರು
ಈಗ ಇವರು ಏನು ಮಾಡ್ತಾ ಇದ್ದಾರೆ ಎನ್ನುವುದನ್ನು ಜನ ಗಮನಿಸುತ್ತಿದ್ದಾರೆ. ಇದನ್ನು ಸಾಬೀತು ಮಾಡಿ ಅಂದರೆ ಹೇಗೆ ಮಾಡೋದು? ಹಿಂದೆ 40% ಕಮಿಷನ್‌ ಆರೋಪವನ್ನು ಸಾಬೀತು ಮಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಈಗ ಅವರದೇ ಸರಕಾರ ಬಂದಿದೆ, ಪರ್ಸೆಂಟೇಜ್ ಆರೋಪವನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ, ಡಿಕೆಶಿಗೆ ಪರಿಜ್ಞಾನ ಇರಲಿಲ್ವಾ?
ಗ್ಯಾರಂಟಿ ಯೋಜನೆಗಳಿಗೆ ವಿಧಿಸಿದ ಷರತ್ತುಗಳ ಬಗ್ಗೆ ಮಾತನಾಡಿದ ಅವರು, ಒಂದು ಗ್ಯಾರಂಟಿಯಲ್ಲಿ ಮಾತ್ರವಲ್ಲ, ಬದಲಾಗಿ 5 ಗ್ಯಾರಂಟಿಗಳಲ್ಲೂ ಗೊಂದಲಗಳಿವೆ. ಗ್ಯಾರಂಟಿ ಘೋಷಣೆ ಮಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಪರಿಜ್ಞಾನ ಇರಲಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮಾಷೆಯಾಗಿ ಮಾತಾಡುತ್ತಿದ್ದಾರೆ. ಇಂಧನ ಇಲಾಖೆ ಸಚಿವರು ಕೆಜೆ ಜಾರ್ಜ್ ಅವರಿಗೆ ಅರ್ಥ ಆಗಿಲ್ಲ ಎಂದು ಅನಿಸುತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮಾಹಿತಿ ಇಲ್ಲ ಅನಿಸುತ್ತಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅತೀವ ಕುತೂಹಲ, ನಿರೀಕ್ಷೆ ಹುಟ್ಟು ಹಾಕಲಾಗಿತ್ತು. ಕೊನೆಪಕ್ಷ ಆ ಇಲಾಖೆಗಳನ್ನು ಮುನ್ನಡೆಸುವ ಇಬ್ಬರೂ ಸಚಿವರಿಗೆ ಈ ಕಾರ್ಯಕ್ರಮಗಳ ಬಗ್ಗೆ ಖಾತರಿ, ಸ್ಪಷ್ಟತೆ ಇಲ್ಲ ಎನ್ನುವುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತದೆ ಎಂದು ಟೀಕಾಪ್ರಹಾರ ನಡೆಸಿದರು.

ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು? ಈಗ ಸಬೂಬು ಏನು ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, 15 ಲಕ್ಷ ಬಿಜೆಪಿಯವರು ಕೊಟ್ಟಿದ್ದಾರಾ ಅಂತ ಕೇಳುತ್ತಾ ಇದ್ದಾರೆ. ಅವರು ಕೊಟ್ಟಿಲ್ಲ ಅಂತ ನಾನು ಕೊಡಲ್ಲ ಅನ್ನೋದು ಎಷ್ಟು ಸರಿ? ಘೋಷಣೆ ಮಾಡುವಾಗ ಪರಿಜ್ಞಾನ ಇರಲಿಲ್ವಾ ಹಾಗಾದರೆ ಎಂದು ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ

error: Content is protected !!