ನಟ ಅಭಿಷೇಕ್ ಅಂಬರೀಷ್ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬಹುಕಾಲದ ಗೆಳತಿ ಅವಿವಾ ಬಿಡಪ ಜೊತೆ ಅವರು ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಬಹಳ ಅದ್ದೂರಿಯಾಗಿ ಸಂಗೀತ್ ಕಾರ್ಯಕ್ರಮ ಕೂಡ ನಡೆಯಲಿದೆ. ಖಾಸಗಿ ಹೋಟೆಲ್ನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ. ‘ರೆಬೆಲ್ ಸ್ಟಾರ್’ ಅಂಬರೀಷ್ ಹಾಗೂ ಸುಮಲತಾ ಕುಟುಂಬಕ್ಕೆ ಇರುವ ಸ್ನೇಹಿತರ ಬಳಗ ದೊಡ್ಡದು. ರಾಜಕೀಯ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ಈ ಕುಟುಂಬದವರು ಸಕ್ರಿಯರಾಗಿರುವುದರಿಂದ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಹಾಗಾಗಿ ಹಲವಾರು ಸೆಲೆಬ್ರಿಟಿಗಳು ಅಭಿಷೇಕ್ ಅಂಬರೀಷ್-ಅವಿವಾ ಬಿಡಪ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂಬರೀಷ್ ಅವರ ಕನಸಿನಂತೆ, ಅವರು ಹೇಳಿದ ರೀತಿಯಲ್ಲೇ ಈ ವಿವಾಹ ನಡೆಯುತ್ತಿದೆ. ‘ಜೂನಿಯರ್ ರೆಬೆಲ್ ಸ್ಟಾರ್’ ಮದುವೆಗೆ ಸಕಲ ತಯಾರಿ ಆಗಿದೆ. ಸಂಗೀತ್ ಕಾರ್ಯಕ್ರಮಕ್ಕಾಗಿ ಅಂಬಿ ಮನೆಯಲ್ಲಿ ಇಂದು ರಿಹರ್ಸಲ್ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳನ್ನು ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ.
ಮದುವೆ ಮುಹೂರ್ತ ಯಾವಾಗ?
ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಮದುವೆ ಆಗುತ್ತಿದ್ದಾರೆ. ಮೆಹಂದಿ ಶಾಸ್ತ್ರದಲ್ಲಿ ಅಭಿಷೇಕ್ ಅಂಬರೀಷ್ ಅವರು ಮದರಂಗಿ ಹಾಕಿ ಮಿಂಚಿದ್ದಾರೆ. ಈ ಫೋಟೋದಲ್ಲಿ ಅವರು ತಮ್ಮ ಪ್ರೀತಿಪಾತ್ರರ ಹೆಸರನ್ನು ಬರೆಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೂನ್ 2ರಂದು ಬೆಳಿಗ್ಗೆ ಅಭಿಷೇಕ್ ಅಂಬರೀಷ್ ಅವರ ಬೆಂಗಳೂರು ನಿವಾಸದಲ್ಲಿ ಅರಿಶಿಣ ಶಾಸ್ತ್ರ ನಡೆಯಿತು. ಬಳಿಕ ಮೆಹಂದಿ ಶಾಸ್ತ್ರಗಳು ನಡೆದವು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಷೇಕ್ ಅವರು ಕೈ ಮೇಲೆ ರೆಬೆಲ್, ಸುಮಾ, ಅವಿವಾ, ಮಂಡ್ಯ ಎಂಬ ಹೆಸರುಗಳನ್ನು ಬರೆಸಿಕೊಂಡಿದ್ದಾರೆ. ಈ ಫೋಟೋನ ಅವರ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.