ತುಮಕೂರು: ಇನ್ನೆರಡು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಘೋಷಣೆ ಆಗಲಿದೆ. ಯಾರ ಮೇಲೆ ವಿಶ್ವಾಸ ಇದೆಯೋ ಅಂತಹ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಿಗಲಿದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನಿಭಾಯಿಸುತ್ತೇನೆ ಎಂದರು. ಹಾಲಿನ ಪ್ರೋತ್ಸಾಹಧನ ಕಡಿಮೆ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಕೆಲವು ಒಕ್ಕೂಟಗಳು ಹಾಲಿನ ಪೋತ್ಸಾಹಧನ ಕಡಿಮೆ ಮಾಡಿವೆ. ಆದರೆ ಸರ್ಕಾರ ಕೊಡುವ ಪ್ರೋತ್ಸಾಹಧನ ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜುಲೈನಲ್ಲಿ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಿದ ಪರಮೇಶ್ವರ್, ಎತ್ತಿನಹೊಳೆ ಯೋಜನೆ 2 ವರ್ಷದಲ್ಲಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು. ಔರಾದ್ಕರ್ ವರದಿ ಬಗ್ಗೆ ಪರಿಶೀಲನೆ ಮಾಡಲಾಗುವುದು. ಪೊಲೀಸರಿಗೆ ಹೆಚ್ಚು ದಂಡ ವಸೂಲಿಗೆ ಯಾವ ಟಾರ್ಗೆಟ್ ನೀಡಿಲ್ಲ ಎಂದರು.
ಪೊಲೀಸ್ ಹುದ್ದೆಗಳ ಭರ್ತಿಗೆ ಕ್ರಮ: ಪರಮೇಶ್ವರ್
ಖಾಲಿ ಇರುವ ಎಲ್ಲ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ ಮಾಡಲಾಗುವುದು. 545 ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ. PSI ನೇಮಕಾತಿ ಅಕ್ರಮ ಬಗ್ಗೆ ಹೈಕೋರ್ಟ್ನಲ್ಲಿ ಸ್ಟೇ ಆಗಿದೆ, ಮುಂದೆ 450 ಜನರಿಗೆ ನ್ಯಾಯ ಒದಗಿಸುವ ಕಾನೂನು ಸಲಹೆ ಪಡೆದು ಚರ್ಚಿಸಿ ತಿರ್ಮಾನ ಮಾಡಲಾಗುವುದು ಎಂದರು.
ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ಬರಬೇಕಿದ್ದ 6 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ನಮಗೆ 24 ಟಿಎಂಸಿ ನೀರು ಬರಲೇಬೇಕು. 18-19-21 ಹೀಗೆ ಬಂದಿದೆ. ನಮಗೆ ಬರುವ ನೀರು ಸಂಪೂರ್ಣ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಅನಗತ್ಯ ಯೋಜನೆಗಳು ಇದ್ದರೆ ಸ್ಥಗಿತ: ಪರಮೇಶ್ವರ್
ನಿನ್ನೆ ನಡೆದ ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ. 5 ವರ್ಷದವರೆಗೆ ಗ್ಯಾರಂಟಿಗಳು ಇರುತ್ತವೆ, 1 ವರ್ಷಕ್ಕೆ ನಿಲ್ಲಲ್ಲ. ಯಾವ ರೀತಿ ಕಾರ್ಯಗತ ಮಾಡಬೇಕೆಂದು ಚರ್ಚೆ ಮಾಡಿದ್ದೇವೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು ಗ್ಯಾರಂಟಿಗಳ ಅನುಷ್ಠಾನ ಮಾಡಲಾಗುವುದು. ಅನಗತ್ಯ ಯೋಜನೆಗಳು ಇದ್ದರೆ ನಾವು ಸ್ಥಗಿತಗೊಳಿಸುತ್ತೇವೆ. ಎಚ್ಚರಿಕೆಯಿಂದ ಡಿಪಿಆರ್ ಮಾಡಲಾಗುತ್ತದೆ. ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಯೋಜನೆ ಅನುಷ್ಠಾನ ಆಗಲಿದೆ ಎಂದರು.
ಹಣ ಉಳಿತಾಯ ಮಾಡಲು ಕೆಲಸ ಮಾಡಲಾಗುವುದು. ಅನಗತ್ಯವಾದ ಹಣ ಖರ್ಚು ಮಾಡದಂತೆ ಕಾರ್ಯಕ್ರಮ ರೂಪಿಸಲಾಗುವುದು. ಕುಂಠಿತವಾಗದ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಅನಗತ್ಯವಾದ ಯೋಜನೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಜನಪರ ಆಡಳಿತ ಕೊಡುತ್ತೇವೆ ಅಂತಾ ಹೇಳಿದ್ದೆವು. ಕಳೆದ ನಾಲ್ಕು ವರ್ಷಗಳಿಂದ ಬೆಲೆ ಏರಿಕೆ ಆಗಿದ ಬಗ್ಗೆ ನೋವನ್ನ ಮತ ನೀಡುವುದುರ ಮೂಲಕ ಹೇಳಿದ್ದಾರೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.