ದೆಹಲಿ: ಭಾರತೀಯ ಕುಸ್ತಿಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿತ್ತಿರುವ ಕುಸ್ತಿಪಟುಗಳು ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಇಂದು ಸಂಜೆ 6 ಗಂಟೆಗೆ ತಾವು ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ಬಿಡುವುದಾಗಿ ಹೇಳಿದ್ದಾರೆ. ಡಬ್ಲ್ಯುಎಫ್ಐ ಮುಖ್ಯಸ್ಥರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ತಿಂಗಳಿನಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪೈಲ್ವಾನರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಪ್ರತಿಭಟನಾ ನಿರತರ ವಸ್ತುಗಳನ್ನು ಅಲ್ಲಿಂದ ಖಾಲಿ ಮಾಡಿದ್ದರು. ಭಾನುವಾರದ ಘಟನೆ ನಂತರ ತೀವ್ರವಾಗಿ ನೊಂದಿರುವ ಕುಸ್ತಿಪಟುಗಳು ಈಗ ಪದಕಗಳನ್ನು ಗಂಗಾದಲ್ಲಿ ಬಿಡಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಸಾಕ್ಷಿ ಮಲಿಕ್ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಅಲ್ಲಿಂದ ಅವರನ್ನು ಬಲವಂತವಾಗಿ ತೆರವು ಮಾಡಿಸಿದ್ದಲ್ಲದೆ, ಅವರ ಸಾಮಾನು ಸರಂಜಾಮುಗಳನ್ನು ಪೊಲೀಸರು ಅಲ್ಲಿಂದ ಖಾಲಿ ಮಾಡಿದ್ದರು. ಈ ಘಟನೆಯಿಂದ ತೀವ್ರ ವಾಗಿ ನೊಂದಿರುವ ಕುಸ್ತಿಪಟುಗಳು ಮಂಗಳವಾರ ಸಂಜೆ 6 ಗಂಟೆಗೆ ಗಂಗಾ ನದಿಯಲ್ಲಿ ತಮ್ಮ ಪದಕಗಳನ್ನು ಬಿಟ್ಟು, ಇಂಡಿಯಾ ಗೇಟ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ.
ಕುಸ್ತಿಪಟು ಸಾಕ್ಷಿ ಮಲಿಕ್ ಟ್ವಿಟ್ಟರ್ನಲ್ಲಿ ಹೇಳಿಕೆ ನೀಡಿದ್ದು, ಕುಸ್ತಿಪಟುಗಳು ಹರಿದ್ವಾರಕ್ಕೆ ಹೋಗಿ ಸಂಜೆ 6 ಗಂಟೆಗೆ ಗಂಗಾ ನದಿಯಲ್ಲಿ ಪದಕಗಳನ್ನು ಮುಳುಗಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಪದಕಗಳು ನಮ್ಮ ಜೀವನ, ನಮ್ಮ ಆತ್ಮಗಳು, ಇಂದು ಅವುಗಳನ್ನು ಗಂಗಾದಲ್ಲಿ ಎಸೆದ ನಂತರ ಬದುಕಲು ಯಾವುದೇ ಕಾರಣವಿಲ್ಲ. ಇದಾದ ನಂತರ ನಾವು ಇಂಡಿಯಾ ಗೇಟ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮನ್ನು ಅವರ ಹೆಣ್ಣುಮಕ್ಕಳ ಎಂದು ಕರೆಯುವ ಪ್ರಧಾನಿ ಒಮ್ಮೆಯೂ ನಮ್ಮ ಬಗ್ಗೆ ಕಾಳಜಿಯನ್ನು ತೋರಿಸಲಿಲ್ಲ. ಬದಲಾಗಿ, ಅವರು ಬ್ರಿಜ್ ಭೂಷಣ್ ಸಿಂಗ್ ಅವರನ್ನು ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಗೆ ಆಹ್ವಾನಿಸಿದರು. ಅವರು ಶುಭ್ರ ಬಿಳಿ ಬಟ್ಟೆಯಲ್ಲಿ ಫೋಟೊಗಳಿಗೆ ಪೋಸ್ ನೀಡಿದರು. ಈ ಹೊಳಪು ನಮ್ಮನ್ನು ಕುಟುಕುತ್ತಿದೆ ಎಂದು ಸಾಕ್ಷಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ,.
ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಉನ್ನತ ಕುಸ್ತಿಪಟುಗಳು, ಅಪ್ರಾಪ್ತ ವಯಸ್ಕ ಸೇರಿದಂತೆ ಮಹಿಳಾ ಅಥ್ಲೀಟ್ಗಳ ಮೇಲೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳವೆಸಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಏಪ್ರಿಲ್ 23 ರಂದು ಜಂತರ್ ಮಂತರ್ನಲ್ಲಿ ಪ್ರಾರಂಭವಾದ ಪ್ರತಿಭಟನೆಯು ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು ಹೃದಯ ವಿದ್ರಾವಕ ದೃಶ್ಯಗಳನ್ನು ಕಂಡಿತು. ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಕುಸ್ತಿಪಟುಗಳನ್ನು ಪೊಲೀಸರು ಹಿಡಿದು ಎಳೆದಾಡಿ ಪೊಲೀಸ್ ವ್ಯಾನ್ಗೆ ತಳ್ಳಿದ್ದರು.
ಕಾಂಗ್ರೆಸ್ನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರತಿಪಕ್ಷಗಳ ಉನ್ನತ ನಾಯಕರು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕೇಂದ್ರ ಸರ್ಕಾರ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.