ಕೂಗು ನಿಮ್ಮದು ಧ್ವನಿ ನಮ್ಮದು

ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯ, ಪಾಠಗಳಿಗೆ ಅವಕಾಶ ಕೊಡುವುದಿಲ್ಲ; ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯ ಮತ್ತು ಪಾಠಗಳಿಗೆ ಅವಕಾಶ ಕೊಡುವುದಿಲ್ಲ. ಭಯದ ವಾತಾವರಣ ಅಳಿಸಿ ನೆಮ್ಮದಿಯ ವಾತಾವರಣ ಸೃಷ್ಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೇಳಿದರು. ಗೃಹ ಕಚೇರಿ ಕೃಷ್ಣದಲ್ಲಿ ಸೋಮವಾರ ಸುಮಾರು 40 ಕ್ಕೂ ಹೆಚ್ಚು ಮಂದಿ ಸಾಹಿತಿ ಬರಹಗಾರರು ಹಾಗೂ ನಾನಾ ಜನಪರ ಸಂಘಟನೆಗಳ ಮುಖ್ಯಸ್ಥರ ಜತೆಗೆ ನಡೆದ ಸಭೆಯಲ್ಲಿ ಈ ಭರವಸೆ ನೀಡಿದರು. ಕನ್ನಡ ನಾಡಿನ ಸೌಹಾರ್ದ ಮತ್ತು ಜಾತ್ಯತೀತ ಪರಂಪರೆಯ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ದ್ವೇಷ ರಾಜಕಾರಣವನ್ನು ಬಲಿ ಹಾಕಿ, ಭಯದ ವಾತಾವರಣ ಅಳಿಸಲಾಗುವುದು ಎಂದು ಅವರು ತಿಳಿಸಿದರು.

ದೇಶವನ್ನು ಅಪಾಯದ ಸುಳಿಗೆ ದೂಡುತ್ತಾ, ಈ‌ ಮಣ್ಣಿನ ಬಹುತ್ವವನ್ನು ನಾಶ ಮಾಡುತ್ತಿರುವ ಬಿಜೆಪಿ ಪರಿವಾರದ ವಿರುದ್ಧ ಖಚಿತ ನಿಲುವು ತೆಗೆದುಕೊಂಡು ಸ್ವಯಂಪ್ರೇರಿತವಾಗಿ ಈ ಚುನಾವಣೆಯಲ್ಲಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಕ್ಕಾಗಿ ಸಾಹಿತಿ-ಬರಹಗಾರರಿಗೆ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು.

ಸುಳ್ಳು ಮೊಕದ್ದಮೆ ವಾಪಸ್
ಸಾಹಿತಿ, ಬರಹಗಾರ, ಕನ್ನಡ ಹೋರಾಟಗಾರರು, ದಲಿತ ಚಳವಳಿಗಳ ಹೋರಾಟಗಾರರು, ರೈತ-ಕಾರ್ಮಿಕರ ಮೇಲೆ ಹಾಕಿದ್ದ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು. ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಹೊಸ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣ ಕ್ಷೇತ್ರವನ್ನು ಗಬ್ಬೆಬ್ಬಿಸಲು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಮತ್ತೊಮ್ಮೆ ಪ್ರತ್ಯೇಕವಾದ ಸಭೆ ಚರ್ಚಿಸಿ ನಿಷ್ಠುರ ತೀರ್ಮಾನ ತೆಗೆದುಕೊಳ್ಳಲಾಗುವುದು. ಅನೈತಿಕ ಪೊಲೀಸ್ ಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್ ಗಳು, ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದೇನೆ. ಬರಹಗಾರರು ನೀಡಿರುವ ಮನವಿ ಪತ್ರದಲ್ಲಿನ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

error: Content is protected !!