ಕಳೆದ ಕೆಲವು ದಿನಗಳಿಂದ ಜನರು ಸುಡುಬಿಸಿಲಿನ ಬೇಗೆಯಿಂದ ತತ್ತರಿಸಿದ್ದರು. ಆದರೆ ಇದೀಗ ವರುಣನ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದೆಹಲಿ-ಎನ್ ಸಿ ಆರ್ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಬುಧವಾರ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಬಲವಾದ ಗಾಳಿ ಬೀಸುತ್ತಿದೆ. ಇದರಿಂದ ಬಿಸಿಲಿನ ಬೇಗೆಯಿಂದ ಬೇಯುತ್ತಿದ್ದ ಜನತೆಗೆ ನೆಮ್ಮದಿ ಸಿಕ್ಕಂತಾಗಿದೆ. ಮಳೆಯಿಂದಾಗಿ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಉತ್ತಮ ವಾತಾವರಣದಿಂದ ಜನಸಾಮಾನ್ಯರು ಕೊಂಚ ಖುಷಿ ಪಟ್ಟಿದ್ದಾರೆ. ಈಗ ಹವಾಮಾನ ಇಲಾಖೆಯು ಮೇ ಅಂತ್ಯದ ಹವಾಮಾನದ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದ್ದು, ಹೇಗಿದೆ ಎಂದು ತಿಳಿಯೋಣ.
ಇಲಾಖೆಯ ಹಿರಿಯ ವಿಜ್ಞಾನಿ ಆರ್ ಕೆ ಜೆನಮಣಿ ಅವರ ಪ್ರಕಾರ, ಇಡೀ ದೇಶದಲ್ಲಿ ಬಿಸಿಗಾಳಿಯ ಉಲ್ಬಣವು ಅಂತ್ಯ ಕಂಡಿದೆ. ಬುಧವಾರದಿಂದಲೇ ತಾಪಮಾನ ಕಡಿಮೆಯಾಗಲಾರಂಭಿಸಿದ್ದು, ಮುಂದಿನ ಒಂದು ವಾರದವರೆಗೆ ಆಕಾಶದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ದೆಹಲಿ-ಎನ್ ಸಿ ಆರ್, ಪಂಜಾಬ್, ರಾಜಸ್ಥಾನ, ಯುಪಿ, ಚಂಡೀಗಢ ಮತ್ತು ಹರಿಯಾಣದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯ ಬಗ್ಗೆ ಐಎಂಡಿ ಆರೆಂಜ್ ಅಲರ್ಟ್ ನೀಡಿದೆ.
ಬಯಲು ಸೀಮೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಗಂಟೆಗೆ 50 ರಿಂದ 70 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸಬಹುದು. ಮತ್ತೊಂದೆಡೆ, ಮುಂದಿನ 2-3 ದಿನಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಮೇ 25, 26 ಮತ್ತು 27 ರಂದು ಗುಡ್ಡಗಾಡು ಪ್ರದೇಶಗಳಲ್ಲಿ ಹಲವೆಡೆ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪೂರ್ವ ಭಾರತದಲ್ಲಿ ಚಂಡಮಾರುತ ಪ್ರಭಾವಿಸುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.
ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ದೆಹಲಿ-ಎನ್ ಸಿ ಆರ್, ಪಶ್ಚಿಮ ಮತ್ತು ಮಧ್ಯ ಉತ್ತರ ಪ್ರದೇಶ, ಪೂರ್ವ ಮತ್ತು ಪಶ್ಚಿಮ ರಾಜಸ್ಥಾನ, ಉತ್ತರ ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಪಂಜಾಬ್, ಹರಿಯಾಣ ಮತ್ತು ಉತ್ತರ ರಾಜಸ್ಥಾನದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಪಶ್ಚಿಮ ಹಿಮಾಲಯದ ಮೇಲ್ಭಾಗದಲ್ಲಿ ಲಘುವಾಗಿ ಮಧ್ಯಮ ಹಿಮಪಾತವು ಸಂಭವಿಸಬಹುದು.
ಕರ್ನಾಟಕದಲ್ಲಿ ಮಳೆ:
ಮಾರ್ಚ್ ಮತ್ತು ಮೇ ತಿಂಗಳ ಬೇಸಿಗೆಯ ನಡುವೆ ಸಂಭವಿಸಿದ ಪೂರ್ವ ಮುಂಗಾರು ಮಳೆಯ ಪರಿಣಾಮದಿಂದ ಈ ಬಾರಿ ಕರ್ನಾಟಕದಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ 67.6 ಮಿಮೀ ಮಳೆಯನ್ನು ದಾಖಲಿಸಿದೆ (42% ಹೆಚ್ಚುವರಿ). ಇನ್ನು ಕಳೆದ 4 ದಿನಗಳಲ್ಲಿ ಬೆಂಗಳೂರು ಸೇರಿ ಹಲವೆಡೆ 800ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಮುಂದಿನ 2-3 ದಿನ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.