ನಾನೇ ದೊಡ್ಡಪ್ಪ.. ನಾನೇ ಮನೆ ಒಡೆಯ ಎಂದು ಮೆರೆಯುತ್ತಿದ್ದ ಆತನ ಕತೆ ಮುಗಿದಿದೆ. ಗುಲಾಬಿ ನೋಟ್‌ಗೆ ಆರ್‌ಬಿಐ ಗುನ್ನಾ ಇಟ್ಟಿದೆ. ಎರಡು ಸಾವಿರ ರೂಪಾಯಿ ನೋಟು ಬ್ಯಾನ್ ಆಗಿದ್ದು, ಇಂದಿನಿಂದ ಎಕ್ಸ್‌ಚೇಂಜ್ ಪ್ರಕ್ರಿಯೆ ಆರಂಭವಾಗಲಿದೆ. ಹಾಗಾದ್ರೆ 2000 ರೂ. ನೋಟು ಬದಲಾವಣೆ ಹೇಗೆ? ಎನ್ನುವ ವಿವರ ಈ ಕೆಳಗಿನಂತಿದೆ.
2000 ರೂ. ಮುಖಬೆಲೆಯ ನೋಟುಗಳ ಚಲಾವಣೆ, ವಿತರಣೆಯನ್ನ ಆರ್‌ಬಿಐ ಬಂದ್ ಮಾಡಿದೆ. ಇಂದಿನಿಂದ ಅಂದರೆ ಮೇ 23ರಿಂದ ಸೆಪ್ಟೆಂಬರ್ 30ರ ಒಳಗೆ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿ ನೀಡುವಂತೆ ಆರ್‌ಬಿಐ ಆದೇಶ ಹೊರಡಿಸಿದೆ. 2000 ರೂ. ಮುಖಬೆಲೆಯ ನೋಟುಗಳನ್ನು ಹೇಗೆ ವಾಪಾಸ್ ಮಾಡಬೇಕು ಎನ್ನುವುದಕ್ಕೆ ಈಗಾಗಲೇ ಆರ್‌ಬಿಐ ಕ್ಲಾರಿಟಿ ನೀಡಿದೆ. ನೋಟು ವಾಪಾಸ್ ಕೊಡಲು ಅರ್ಜಿಯನ್ನೂ ಕೂಡಾ ಬಿಡುಗಡೆ ಮಾಡಿದೆ. ಅಷ್ಟಕ್ಕೂ ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕು..? ಪ್ರಕ್ರಿಯೆ ಹೇಗೆ ಎನ್ನುವ ವಿವರ ಇಲ್ಲಿದೆ.
2000 ರೂ. ನೋಟು ಬದಲಾವಣೆ ಹೇಗೆ?
ನೋಟು ಬದಲಾವಣೆಗೆ ಆರ್‌ಬಿಐ ಅರ್ಜಿ ಬಿಡುಗಡೆ ಮಾಡಿದ್ದು, ಬ್ಯಾಂಕ್‌ನಲ್ಲೇ ಈ ಎಕ್ಸ್‌ಚೇಂಜ್ ಅರ್ಜಿ ಸಿಗಲಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಅರ್ಜಿ ಭರ್ತಿ ಮಾಡಿ ಬ್ಯಾಂಕ್‌ಗೆ ಸಲ್ಲಿಸುವ ಮೂಲಕ 2000 ರೂ ಮುಖ ಬೆಲೆಯ ನೋಟು ಬದಲಿಸಿಕೊಳ್ಳಬಹುದಾಗಿದೆ. ಈ ಅರ್ಜಿಯು ನೋಟು ಬದಲಾವಣೆ ಮಾಡುವವರಿಗೆ ಮಾತ್ರ ಅನ್ವಯವಾಗಲಿದ್ದು, ಗ್ರಾಹಕರು ತಮ್ಮ ಬಳಿ 2000 ರೂ ನೋಟುಗಳಿದ್ದರೆ ಆಯಾ ಬ್ಯಾಂಕ್ ಶಾಖೆಗಳಿಗೆ ತೆರಳಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ವಿಷಯ ಅಂದ್ರೆ 2000 ರೂಪಾಯಿಗೆ ಬದಲಾಗಿ ಹಣವನ್ನ ತಮ್ಮ ಖಾತೆಗೆ ಜಮೆ ಮಾಡಲು ಅರ್ಜಿ ಬೇಕಿಲ್ಲ. ಖಾತೆದಾರರು ತಮ್ಮ ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಕೊಳ್ಳಲು ಇದು ಅನ್ವಯಿಸುವುದಿಲ್ಲ. ಅವರು ಎಂದಿನಂತೆ ತಮ್ಮ ಬ್ಯಾಂಕಿನ ಚಲನ್‌ನಲ್ಲಿ 2000 ರೂ. ನೋಟಿನ ವಿವರ ಬರೆದು ಜಮೆ ಮಾಡಿಕೊಳ್ಳಬಹುದಾಗಿದೆ.
ಇನ್ನು 2000 ರೂ ನೋಟುಗಳನ್ನು ಬದಲಾಯಿಸಲು ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ಯಾವುದೇ ದಾಖಲೆ ಬೇಡ ಎಂದಿದೆ. ಅಷ್ಟೇ ಅಲ್ಲ ಬ್ಯಾಂಕ್‌ನಲ್ಲಿ ಖಾತೆ ಇಲ್ಲದಿದ್ರೂ ನೋಟು ಬದಲಾವಣೆ ಮಾಡಿಕೊಳ್ಳಬಹುದು ಎಂದು ಎಸ್‌ಬಿಐ ಹೇಳಿದೆ.
ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ (RBI), ನೋಟು ರದ್ದತಿ ಪ್ರಕಟಿಸಿತ್ತು. ಅಲ್ಲದೆ, ತಕ್ಷಣದಿಂದಲೇ 2000 ರೂ. ನೋಟುಗಳ ಬದಲು ಬೇರೆ ನೋಟುಗಳನ್ನು ಜನರಿಗೆ ವಿತರಿಸಲು ಇಲ್ಲವೇ, ಅದನ್ನು ಖಾತೆದಾರರ ಖಾತೆಗೆ ಠೇವಣಿಯಾಗಿ ಜಮೆ ಮಾಡಿಸಿಕೊಳ್ಳಲು ಸೂಚನೆ ನೀಡಿತ್ತು. ಇದಕ್ಕೆ ಸೆ.30ರ ಗಡುವು ವಿಧಿಸಿತ್ತು.