ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ವರುಣನ ಅಬ್ಬರ ಜೋರಾಗಿದೆ. ಭಾನುವಾರ ಸುರಿದ ಭಾರೀ ಮಳೆಗೆ ಹಲವೆಡೆ ಮರಗಳು ಧರೆಗುರುಳಿದ್ದು, ಅಂಡರ್ ಪಾಸ್‌ನಲ್ಲಿ ನೀರು ನಿಂತು ಇನ್ಪೋಸಿಸ್ ಉದ್ಯೋಗಿಯೊಬ್ಬರು ಮೃತಪಟ್ಟಿರುವ ದುರಂತವೂ ಸಂಭವಿಸಿದೆ. ಇದಲ್ಲದೆ, ಇತಿಹಾಸದಲ್ಲೇ ಮೊದಲು ಎಂಬಂತೆ ಕಬ್ಬನ್ ಪಾರ್ಕ್ ನಲ್ಲಿ ನೂರಾರು ದೈತ್ಯ ಮರಗಳು ಧರೆಗುರುಳಿವೆ. ಈ ಮಧ್ಯೆ ಇಂದೂ ಸಹ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಮೂರರಿಂದ ನಾಲ್ಕು ದಿನಗಳವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣ ಆರ್ಭಟಿಸಲಿದ್ದು ಈ ಸಮಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನಿಗಾವಹಿಸುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಅಲರ್ಟ್ ಆಗಿದ್ದಾರೆ. ಈ ನಿಟ್ಟಿನಲ್ಲಿ ಸ್ಪೆಷಲ್ ಟ್ರಾಫಿಕ್ ಕಮಿಷನರ್ ಸಲೀಂ ಅವರು ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಟಾಸ್ಕ್ ನೀಡಿದ್ದು, ಕಾರ್ಯ ನಿರ್ವಹಣೆಯ ಸ್ಥಳದ ವ್ಯವಸ್ಥೆ ಬಗ್ಗೆ ಮ್ಯಾಪಿಂಗ್ ಮಾಡಲು ಸೂಚಿಸಿದ್ದಾರೆ.
ಇದಲ್ಲದೆ, ನಗರದ ತಗ್ಗು ಪ್ರದೇಶ, ರಸ್ತೆ ಬದಿ ನೀರು ನಿಲ್ಲುವ ಸ್ಥಳಗಳು, ರಸ್ತೆ ಗುಂಡಿಗಳು, ರಸ್ತೆ ಬದಿಯಲ್ಲಿ ನೀರು ಇಂಗಲು ಹಾಕಿರುವ ಪೈಪ್ ಗಳು, ಅಂಡರ್ ಪಾಸ್, ಬೀಳುವ ಹಂತದಲ್ಲಿರುವ ಮರಗಳು, ಮೇಲ್ಸೇತುವೆಗಳ ನೀರು ಹೋಗುವ ಪೈಪ್ ಸಿಸ್ಟಮ್ ಪರಿಸ್ಥಿತಿಯ ಸಂಪೂರ್ಣ ಚಿತ್ರಣದ ಬಗ್ಗೆ ಮಾಹಿತಿ ಒದಗಿಸುವಂತೆ ಆದೇಶ ನೀಡಿದ್ದಾರೆ.
ಈ ಸಂಬಂಧ ನಗರದ ಎಲ್ಲಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಿರುವ ಸ್ಪೆಷಲ್ ಟ್ರಾಫಿಕ್ ಕಮಿಷನರ್ ಸಲೀಂ ಅವ್ಯವಸ್ಥೆಯ ಫೋಟೋಗಳನ್ನು ಗ್ರೂಪ್ ಗಳಲ್ಲಿ ಲೋಕೇಶನ್ ಸಮೇತ ಕಳುಹಿಸುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಸಮಸ್ಯೆಯನ್ನು ಸ್ಥಳೀಯ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತರುವಂತೆಯೂ ಸಮಸ್ಯೆಯನ್ನು ಜಂಟಿಯಾಗಿ ಶೀಘ್ರದಲ್ಲೇ ಬಗೆಹರಿಸುವಂತೆಯೂ ಕಟ್ಟುನಿಟ್ಟಿನ ಸೂಚನೆ ಈಡಿದ್ದಾರೆ.
ಗುಡುಗು ಮತ್ತು ಸಿಡಿಲಿನಿಂದ ಉಂಟಾಗುವ ಪ್ರತಿಕೂಲ ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಹೇಗಿರಬೇಕು ಎಂದು ಸಲಹೆ ನೀಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳ ಬಗ್ಗೆಯೂ ಸಲಹೆ ನೀಡಿದೆ.
ಮನೆಯಿಂದ ಹೊರಗೆ ತೆರಳುವಾಗ ಹವಾಮಾನ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆಗಳ ಬಗ್ಗೆ ಗಮನಿಸಿಸುವುದು.
ಮಳೆ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗದಂತೆ ಎಚ್ಚರಿಕೆ ವಹಿಸುವುದು. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡುಗಳನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ. ಹಾಗಾಗಿ, ಅಂತಹ ಮನೆಗಳಲ್ಲಿ ವಾಸಿಸುವವರು ಸುರಕ್ಷಿತವಾದ ಕಟ್ಟಡಗಳಿಗೆ ತೆರಳಿ ಅಲ್ಲಿ ಆಶ್ರಯ ಪಡೆಯುವುದು ಹೆಚ್ಚು ಸೂಕ್ತ.
ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರುವುದು. ಮಳೆಯ ಸಂದರ್ಭದಲ್ಲಿ ಅದರಲ್ಲೂ ಗುಡುಗು, ಮಿಂಚಿನ ಸಹಿತ ಮಳೆ ಸುರಿಯುವ ಸಂದರ್ಭದಲ್ಲಿ ಯಾವುದೇ ರೀತಿಯ ವಿದ್ಯುತ್ ಉಪಕರಣ, ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ಅಂತಹ ಕಾಯ್ದುಕೊಳ್ಳುವುದು.
ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನವನ್ನು ನಿಲ್ಲಿಸಿ ಅಲ್ಲಿಯೇ ಆಶ್ರಯ ಪಡೆಯುವುದು.
ಗುಡುಗು ಸಿಡಿಲಿನ ಸಮಯದಲ್ಲಿ ಒಂದೊಮ್ಮೆ ನೀವು ತಂಡದಲ್ಲಿದ್ದರೆ, ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಪರಸ್ಪರರ ನಡುವೆ ಅಂತರ ಕಾಪಾಡಿಕೊಳ್ಳುವುದು.
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಏಕೆಂದರೆ ಇವು ಬಹಳ ಬೇಡ ಮಿಂಚನ್ನು ಆಕರ್ಷಿಸುತ್ತವೆ.