ಕೂಗು ನಿಮ್ಮದು ಧ್ವನಿ ನಮ್ಮದು

ಖ್ಯಾತ ಹಿರಿಯ ನಟ ಶರತ್‌ ಬಾಬು ನಿಧನ..!

ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದ ನಟ ಶರತ್ ಬಾಬು ಅನಾರೋಗ್ಯದಿಂದ ಇಂದು ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶರತ್‌ ಅವರು ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಅವರ ಪಾರ್ಥಿವ ಶರೀರವನ್ನು ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹೌದು.. ನಟ ರಮೇಶ್‌ ಮತ್ತು ನಟಿ ಸುಹಾಸಿನಿ ಅಭಿನಯದ ಅಮೃತವರ್ಷಿಣಿ ಸೇರಿದಂತೆ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಶರತ್ ಬಾಬು ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಏಪ್ರಿಲ್ 20 ರಂದು ಅನಾರೋಗ್ಯಕ್ಕೆ ಒಳಗಾದ ಅವರು ಮೊದಲು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಬಹು ಅಂಗಾಂಗ ವೈಫಲ್ಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶರತ್ ಬಾಬು ಅವರ ಮಾತೃಭಾಷೆ ತೆಲುಗು. ಬಹುಭಾಷಾ ನಟರಾಗಿದ್ದ ಅವರು ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಶರತ್ ಬಾಬು ಕನ್ನಡಕ್ಕಿಂತ ತಮಿಳಿನಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಕಳೆದ ವರ್ಷ ತೆರೆಕಂಡ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾದಲ್ಲಿಯೂ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶರತ್ ಬಾಬು ಅವರ ನಿಜವಾದ ಹೆಸರು ಸತ್ಯಂಬಾಬು ದೀಕ್ಷಿತುಲು. ಅವರು ಜುಲೈ 31, 1951 ರಂದು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಅಮುದಲಾ ಗ್ರಾಮದಲ್ಲಿ ಜನಿಸಿದರು.

ಶರತ್ ಬಾಬು ಅವರ ತಂದೆ ದೊಡ್ಡ ಹೋಟೆಲ್‌ ಮಾಲೀಕರಾಗಿದ್ದರು. ತಮ್ಮಂತೆಯೂ ಮಗ ವ್ಯಾಪಾರವನ್ನು ನೋಡಿಕೊಳ್ಳುತ್ತಾನೆ ಅಂತ ಭಾವಿಸಿದ್ದರು. ಆದರೆ ಶರತ್ ಬಾಬು ಪೊಲೀಸ್ ಅಧಿಕಾರಿಯಾಗಲು ಬಯಸಿದ್ದರಂತೆ. ಆಗ ಅವರ ಸ್ನೇಹಿತರು, ಉಪನ್ಯಾಸಕರು ‘ನೀನು ಹೀರೋ ತರಹ ಕಾಣುತ್ತೀಯಾ… ಸಿನಿಮಾದಲ್ಲಿ ಟ್ರೈ ಮಾಡಬಹುದಲ್ವಾ ?’ ಅಂತ ಸಲಹೆ ನೀಡಿದ್ದಂತೆ. ಆ ಮಾತುಗಳು ಶರತ್ ಬಾಬು ಅವರ ತಾಯಿಯ ಗಮನಕ್ಕೆ ಬಂದವು. ಅಪ್ಪನಿಗೆ ಇಷ್ಟವಿಲ್ಲದಿದ್ದರೂ ಅಮ್ಮನ ಪ್ರೋತ್ಸಾಹದಿಂದ ಮದ್ರಾಸ್‌ಗೆ ಬಂದ ಶರತ್‌ ಬಾಬು ಅವರು, ಅವಕಾಶಗಳನ್ನು ಹುಡುಕುತ್ತಿದ್ದರು.

ಸಿನಿಮಾಗಳಲ್ಲಿ ಅವಕಾಶ ಹುಡುಕುತ್ತಿರುವಾಗಲೇ ರಾಮವಿಜೇತ ಎಂಬ ಸಂಸ್ಥೆ ಹೊಸ ನಟರನ್ನು ಕೇಳಿ ಜಾಹೀರಾತು ಬಿಡುಗಡೆ ಮಾಡಿತ್ತು. ಆ ಘೋಷಣೆಯ ಮೂಲಕವೇ ಶರತ್ ಬಾಬುಗೆ ನಾಯಕನಾಗುವ ಅವಕಾಶ ಸಿಕ್ಕಿತ್ತು. ʼರಾಮರಾಜ್ಯಂʼ ಶರತ್ ನಟಿಸಿದ ಮೊದಲ ಸಿನಿಮಾ. ಆ ಸಿನಿಮಾದೊಂದಿಗೆ ಹೆಸರು ಸಹ ಬದಲಾಯಿತು. ರಜನೀಕಾಂತ್ ಜೊತೆಗೆ ಮುತ್ತು, ಅರುಣಾಚಲಂ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ.

ವೈವಾಹಿಕ ಜೀವನ ಹಿನ್ನೆಲೆ ನೋಡುವುದಾದ್ರೆ ಶರತ್‌ ಅವರು 1974ರಲ್ಲಿ ರಮಾ ಪ್ರಭ ಜೊತೆ ವಿವಾಹವಾಗಿದ್ದರು. 1988ರಲ್ಲಿ ವಿಚ್ಛೇದನ ಪಡೆದು ಅವರಿಂದ ದೂರವಾದರು. ಬಳಿಕ 1990ರಲ್ಲಿ ಸ್ನೇಹ ನಂಬಿಯಾರ್ ಜೊತೆ 2ನೇ ವಿವಾಹವಾದರು. ಆದರೆ ಕಾರಣ ನಿಮಿತ್ತ 2011ರಲ್ಲಿ ಅವರಿಂದಲೂ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದರು. ಕನ್ನಡದ ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು, ಅಮೃತವರ್ಷಿಣಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶರತ್‌ ನಟಿಸಿದ್ದಾರೆ. ಅಮೃತವರ್ಷಿಣಿ ಸಿನಿಮಾದಲ್ಲಿನ ಅವರ ಪಾತ್ರ ಇಂದಿಗೂ ಕನ್ನಡ ಸಿನಿ ಪ್ರೇಮಿಗಳು ಅಚ್ಚು ಮೆಚ್ಚು.

error: Content is protected !!