ಬೆಂಗಳೂರು: ಸಾರ್ವಜನಿಕರಿಗೆ ತಮ್ಮಿಂದಾಗು ಕಿರಿಕಿರಿಗಳನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮುಖ ಹೆಜ್ಜೆ ಇರಿಸಿದ್ದಾರೆ. ತಾವು ಬೆಂಗಳೂರು ನಗರದೊಳಗೆ ಸಂಚಾರ ಮಾಡುವ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವುದು ಬೇಡ ಎಂದು ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ.
ಜೀರೊ ಟ್ರಾಪಿಕ್ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನಗರದಲ್ಲಿ ಮುಖ್ಯಮಂತ್ರಿಗಳು ಓಡಾಡುವಾಗ ಅವರ ಸುಗಮ ಸಂಚಾರಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಿಂದ ಸಿಗ್ನಲ್ಗಳಲ್ಲಿ ವಾಹನ ಸವಾರರು ಹತ್ತಾರು ನಿಮಿಷ ಸುಮ್ಮನೆ ಕಾಯುವಂತಾಗುತ್ತದೆ. ಇದು ಸಾರ್ವಜಕರಿಗೆ ತೊಂದರೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ. ಇದರಿಂದ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಅವರು ತಮಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರಿ ಸ್ವೀಕರಿಸಿದ ಒಂದೇ ದಿನದಲ್ಲಿ ಈ ನಿರ್ಧಾರ ಕೈಗೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಬೆಂಗಳೂರಿನಲ್ಲಿ ತಮಗೆ ಝಿರೋ ಟ್ರಾಫಿಕ್ ಬೇಡ ಎಂದಿದ್ದರು. ಇದೀಗ ಬೊಮ್ಮಾಯಿ ಮಾದರಿಯನ್ನು ಸಿದ್ದರಾಮಯ್ಯನವರೂ ಸಹ ಅನುಸರಿಸಿದ್ದಾರೆ