ಬೆಂಗಳೂರು, ಮೇ 19- ನೂತನ ಸರ್ಕಾರ ಅಸ್ತಿತ್ವದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಲಿದ್ದು, ಬೃಹತ್ ಸಂಖ್ಯೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಲಿದ್ದಾರೆ.
ಹೀಗಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಥವಾ ರಾಜಭವನದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಜನಸಂದಣಿಗೆ ಹೊಂದಾಣಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಕಂಠೀರವ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಕ್ರೀಡಾಂಗಣದ ಒಳಗೆ ಸುಮಾರು 50 ಸಾವಿರ ಮತ್ತು ಹೊರ ಭಾಗದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲು ಅವಕಾಶವಿದೆ. ಹೀಗಾಗಿ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದರೂ ಜನಸಂದಣಿಯನ್ನು ನಿರ್ವಹಿಸಲು ಸಾಧ್ಯವಾಗುವಂತೆ ತಯಾರಿಗಳು ನಡೆಯುತ್ತಿವೆ.
ನಿಯೋಜಿತ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಗ್ಗೆ ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾರ್ಯಕ್ರಮದ ತಯಾರಿ ಕುರಿತು ಪರಿಶೀಲನೆ ನಡೆಸಿದರು. ಅಧಿಕಾರಿಗಳು ನಿನ್ನೆ ಸಂಜೆಯಿಂದಲೇ ಬ್ಯಾರಿಕೇಡ್‍ಗಳನ್ನು ಅಳವಡಿಸಿ ವ್ಯವಸ್ಥಿತವಾದ ಆಯೋಜನೆಗಳನ್ನು ಕೈಗೊಂಡಿದ್ದಾರೆ. ರಾಷ್ಟ್ರೀಯ ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಭದ್ರತೆ ಹಾಗೂ ಶಿಷ್ಟಾಚಾರದಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಮತ್ತು ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ ಅವರು ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದು, ಭದ್ರತೆ ಕುರಿತು ಲೋಪಗಳು ಕಂಡುಬಂದಿದ್ದವು. ಈ ಬಾರಿ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಿದ್ದು, ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ.ಪ್ರತಿ ಹಂತದಲ್ಲೂ ಶಿಷ್ಟಾಚಾರ ಪಾಲನೆಗೆ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ನಾಯಕರನ್ನು ಗೌರವಯುತವಾಗಿ ಸತ್ಕರಿಸಲು ಎಲ್ಲ ತಯಾರಿಗಳು ನಡೆಯುತ್ತಿವೆ. ಭದ್ರತೆಗಾಗಿ ಅಗತ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ನಾಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಜತೆಗೆ ಸುಮಾರು 20ಕ್ಕೂ ಹೆಚ್ಚು ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಹೇಳಲಾಗಿದೆ.ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ಮತ್ತು ಬೆಂಗಳೂರಿನ ಕೇಂದ್ರ ಭಾಗದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.