ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಿಜೆಪಿ ಮೇ 21ರಂದ ಅವಲೋಕನಾ ಸಭೆ ಕರೆದಿದೆ. ಭಾನುವಾರ ಸಂಜೆ 4 ಗಂಟೆಗೆ ಬೆಂಗಳೂರು ನಗರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಈ ಸಭೆ ಕರೆಯಲಾಗಿದ್ದು, ಬಿಜೆಪಿ ಜಿಲ್ಲಾಧ್ಯಕ್ಷರು, ವಿಭಾಗ ಉಸ್ತುವಾರಿಗಳು, ಸಹ ಉಸ್ತುವಾರಿಗಳು, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಹ ಸಂಘಟನಾ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ.
ಚುನಾವಣಾ ಸಮೀಕ್ಷೆಗಳ ವರದಿಗಳನ್ನು ಮೀರಿ ಕರ್ನಾಟಕದಲ್ಲಿ ಕಾಂಗ್ರೆಸ್ ಭಾರೀ ಗೆಲುವು ಸಾಧಿಸಿದ್ದು, ಬಿಜೆಪಿ ನಿರೀಕ್ಷೆ ಮಾಡದಂತಹ ಸೋಲು ಕಂಡಿದೆ. 135 + ಸ್ಥಾನಗಳನ್ನು ಪಡೆದುಕೊಂಡಿರುವ ಕಾಂಗ್ರೆಸ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಮೇ 20ರಂದು ಸಿಎಂ ಡಿಸಿಎಂ ಮತ್ತು ಕೆಲ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇತ್ತ 65 ಸ್ಥಾನಗಳನ್ನು ಗೆದ್ದ ಬಿಜೆಪಿ ಆತ್ಮಾವಲಕೋನ ನಡೆಸಲು ಮುಂದಾಗಿದೆ.
ಈಗಾಗಲೇ ಸೋಲಿನ ಕೆಲವು ನಿಖರ ಕಾರಣಗಳನ್ನು ಬಿಜೆಪಿ ಹುಡುಕಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕಾತಿಯಲ್ಲಿನ ಬದಲಾವಣೆ ಸೋಲಿಗೆ ಪ್ರಧಾನ ಕಾರಣ ಎಂಬ ಮಾಹಿತಿ ಪಡೆದಿದೆ. ಅಯಾಯ ಜಿಲ್ಲೆಗಳ ಸಚಿವರನ್ನು ಬಿಟ್ಟು ಬೇರೆ ಜಿಲ್ಲೆಗಳ ಸಚಿವರನ್ನು ಉಸ್ತುವಾರಿ ಮಾಡಿ ಪ್ರಯೋಗ ಮಾಡಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಉಸ್ತುವಾರಿ ಸಚಿವರು ಜಿಲ್ಲೆಗಳಿಂದ ನಿಖರ ಮಾಹಿತಿ ತೆಗೆಯುವಲ್ಲಿ ವಿಫಲವಾಗಿದ್ದು, ತಮ್ಮ ಸ್ವಂತ ಜಿಲ್ಲೆ ಅಲ್ಲ ಎಂಬ ಕಾರಣಕ್ಕೆ ಉಸ್ತುವಾರಿ ಸಚಿವರು ಆಸಕ್ತಿ ತೋರಿಸಿಲ್ಲ. ಹೀಗಾಗಿ ಜಿಲ್ಲೆಗಳ ವಾಸ್ತವ ಸ್ಥಿತಿ ಮಾಹಿತಿ ಪಡೆಯುವಲ್ಲಿ ರಾಜ್ಯ ಬಿಜೆಪಿ ವಿಫಲವಾಗಿತ್ತು.
ಇದಲ್ಲದೆ, ನಿಗಮ ಮತ್ತು ಮಂಡಳಿಗಳ ಸೂಕ್ತವಲ್ಲದ ನೇಮಕಾತಿಯಿಂದಲೂ ಪಕ್ಷಕ್ಕೆ ನಷ್ಟವಾಗಿದೆ. ಮೋದಿ ಅಲೆ ಇದೆ ಎಂದು ಅತಿಯಾಗಿ ನಂಬಿಕೊಂಡಿದ್ದು ಕೂಡಾ ಹಿನ್ನೆಡೆಗೆ ಕಾರಣವಾಗಿದೆ. ಹಳೆ ಮೈಸೂರು ಭಾಗದಲ್ಲಿ 1:10 ಮತ ಪ್ರಮಾಣ ಹೆಚ್ಚಳವಾದರೂ ಲಾಭವಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಜೆಡಿಎಸ್ ಮತಗಳನ್ನು ಕಸಿದಿದ್ದು ಕಾಂಗ್ರೆಸ್ ಪಕ್ಷಕ್ಕೆ ಲಾಭ.
ನಿಗಮ, ಮಂಡಳಿಗಳ ನೇಮಕಾತಿ ವಿಚಾರದಲ್ಲಿನ ವಿಳಂಬ ನೀತಿಯಿಂದಾಗಿ ಕಾರ್ಯಕರ್ತರು ಬೇಸತ್ತಿದ್ದರು, ಕೆಲವು ಕಡೆ ಅಭ್ಯರ್ಥಿಗಳ ಬದಲಾವಣೆಯಿಂದ ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಈ ಕಾರಣಗಳೊಂದಿಗೆ ಕಾಂಗ್ರೆಸ್ನ ಉಚಿತ ಗ್ಯಾರಂಟಿಗಳು ಬಿಜೆಪಿ ಲೆಕ್ಕಾಚಾರಗಳು ಅಡಿಮೇಲು ಮಾಡಿತು.