ಬೆಂಗಳೂರು: ನಾಳೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಂಬಂಧ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಇಂದು ಕಾರ್ಯಕ್ರಮ ಸ್ಥಳಕ್ಕೆ ನಿಯೋಜಿತ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾರ್ಯಕ್ರಮ ಸಿದ್ಧತೆ ಬಗ್ಗೆ ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿದೆ. ನಾಳಿನ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ಇರುತ್ತದೆ ಎಂದರು.
ನಾಳೆಯ ಕಾರ್ಯಕ್ರಮದ ಮೂಲಕ ನಾವು ಯಾವ ಸಂದೇಶವೂ ಕೊಡುತ್ತಿಲ್ಲ. ಈಗಾಗಲೇ ಜನರು ಏನು ಸಂದೇಶ ಕೊಡಬೇಕೋ ಕೊಟ್ಟಿದ್ದಾರೆ. ಕಾರ್ಯಕ್ರಮ ಸಿದ್ಧತೆ ಬಗ್ಗೆ ಅಧಿಕಾರಿಗಳಿಗೆ ಕೆಲ ಸಲಹೆ, ಸೂಚನೆ ನೀಡಿದೆ. ಜನತೆಗೂ ಹೇಳುತ್ತಿದ್ದೇನೆ, ಯಾರೂ ಕೂಡ ಆಹ್ವಾನಕ್ಕಾಗಿ ಕಾಯಬೇಡಿ. ಎಲ್ಲರಿಗೂ ಅಹ್ವಾನ ಇರುತ್ತೆ. ಎಲ್ಲರೂ ಬರಬೇಕು ಎಂದು ಆಹ್ವಾನಿಸಿದರು. ಈ ಕಾರ್ಯಕ್ರಮದ ಮೂಲಕ ಬಿಜೆಪಿಗೆ ಸಂದೇಶ ವಿಚಾರವಾಗಿ ಮಾತನಾಡಿದ ಅವರು ನಾವು ಯಾವ ಸಂದೇಶ ಕೊಡೋಕೆ ಹೋಗಲ್ಲ. ಜನ ಈಗಾಗಲೇ ಏನು ಸಂದೇಶ ಕೊಡಬೇಕು ಕೊಟ್ಟಿದ್ದಾರೆ ಎಂದರು.
ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಸಿದ್ದರಾಮಯ್ಯ ಪ್ರಮಾಣವಚನ ನಾಳೆ ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್ ಕಲಿಗಳಿಗೆ ಪಟ್ಟಾಭಿಷೇಕ ನಡೆಯಲಿದೆ. ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ 28 ಶಾಸಕರು ಸಚಿವರಾಗಿ ಪದಗ್ರಹಣ ಸಾಧ್ಯತೆ ಇದೆ. ಆದ್ರೆ ಎಷ್ಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವುದೇ ಕೈ ನಾಯಕರು ಗುಟ್ಟಾಗೇ ಇಟ್ಟಿದ್ದಾರೆ.