ಕೇಸರಿ ಬಿಳಿ ಹಸಿರು, ನೋಡ ನಮ್ಮ ಬಾವುಟ. ತಲೆಯನೆತ್ತಿ ಹಾರುತಿಹುದು ನಮ್ಮ ಹೆಮ್ಮೆ ಬಾವುಟ.
ಹೌದು, ರಾಷ್ಟ್ರಧ್ವಜ ಅಂದ್ರೆ ಪ್ರತಿಯೊಬ್ಬರಿಗೂ ಹೆಮ್ಮೆ. ದೇಶಭಕ್ತಿಯ ರಕ್ತ ಮೈಯಲ್ಲಿ ಹರಿಯುವಂತೆ ಮಾಡುವ ಶಕ್ತಿ ನಮ್ಮ ರಾಷ್ಟ್ರಧ್ವಜಕ್ಕಿದೆ. ಅಖಂಡ ಭಾರತವನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳುವ ಶಕ್ತಿ ನಮ್ಮ ತ್ರಿವರ್ಣ ಧ್ವಜಕ್ಕಿದೆ. ಒಟ್ಟಿನಲ್ಲಿ ರಾಷ್ಟ್ರದ ಮುಖವೇ ರಾಷ್ಟ್ರಧ್ವಜ ಎಂದರೆ ತಪ್ಪಾಗಲಾರದು. ಆದರೇ ಈ ತ್ರಿವರ್ಣಧ್ವಜ ದೇಶದ ಒಂದೇ ಜಾಗದಲ್ಲಿ ಮಾತ್ರ ತಯಾರಾಗುತ್ತದೆ ಎಂದರೆ ನಂಬಲು ಸಾಧ್ಯವಿದೆಯಾ…? ಹೌದು.. ನೀವು ನಂಬಲೇ ಬೇಕು. ಈ ಒಂದು ಜಾಗದಲ್ಲಿ ಮಾತ್ರ ನಮ್ಮ ಹೆಮ್ಮೆಯ ರಾಷ್ಟ್ರಧ್ವಜ ತಯಾರಾಗುತ್ತದೆ.
ರಾಷ್ಟ್ರಧ್ವಜಕ್ಕೆ ಮಾನ್ಯತೆ: ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಬೇರೆ ಬಣ್ಣಗಳಿಂದ ಗುರುತಿಸಲಾಗುತಿತ್ತು. ನಂತರ ಮಹಾತ್ಮ ಗಾಂಧಿ ನಿರ್ದೇಶನದಂತೆ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನು ಒಳಗೊಂಡ ತ್ರಿವರ್ಣ ಧ್ವಜ ಅಳವಡಿಕೆ ಮಾಡಲಾಯಿತು. 1947 ಜುಲೈ 22 ರಂದು ನಮ್ಮ ರಾಷ್ಟ್ರಧ್ವಜಕ್ಕೆ ಅಂಗಿಕಾರ ಸಿಕ್ಕಿದ್ದು ವಿಶೇಷ.
ರಾಷ್ಟ್ರಧ್ವಜ ತಯಾರಿಸಲು ಮಾನದಂಡ: ತಮಗೆ ತೋಚಿದಂತೆ ರಾಷ್ಟ್ರಧ್ವಜ ತಯಾರಿಸುವ ಹಕ್ಕು ಸಂವಿಧಾನದಲ್ಲಿ ಯಾರಿಗೂ ಇಲ್ಲ. ಭಾರತೀಯ ಸ್ಟ್ಯಾಂಡರ್ಡ್ಸ್ ಬ್ಯೂರೋ ಕೆಲವೊಂದು ನಿಬಂಧನೆಗಳನ್ನು ಮಾಡಿದೆ. ಆ ನಿಬಂಧನೆಗಳಿಗೆ ತಕ್ಕಂತೆ ನಮ್ಮ ರಾಷ್ಟ್ರಧ್ವಜದ ಅಳತೆ ಹಾಗೂ ಬಳಸುವ ಬಟ್ಟೆಗಳನ್ನು ಒಳಗೊಂಡ ಎಲ್ಲಾ ಮಾನದಂಡಗಳನ್ನು ಅಳವಡಿಸಬೇಕು. ಜೊತೆಗೆ ರಾಷ್ಟ್ರಧ್ವಜ ತಯಾರಿಸಲು ಕರ್ನಾಟಕದ ಈ ಸಂಸ್ಥೆಗೆ ಮಾತ್ರ ಅನುಮತಿ ಇದ್ದು ಅವರು ಮಾತ್ರ ತಯಾರಿಸುತ್ತಾರೆ.
ಯಾವುದು ರಾಷ್ಟ್ರಧ್ವಜ ತಯಾರಿಸುವ ಕರ್ನಾಟಕದ ಸಂಸ್ಥೆ: ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹಾರಾಡುವ ನಮ್ಮ ತ್ರಿವರ್ಣ ಧ್ವಜ ಕರ್ನಾಟಕದಲ್ಲಿ ತಯಾರಾಗುತ್ತದೆ ಎಂದರೆ ಎಷ್ಟು ಹೆಮ್ಮೆಯಾಗಬೇಡ ಹೇಳಿ. ಹೌದು.. ಧಾರವಾಡ ಜಿಲ್ಲೆಯ ಗರಗ ಗ್ರಾಮ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಈ ಅನುಮತಿ ಹೊಂದಿರುವ ಶ್ರೇಷ್ಠ ಸಂಸ್ಥೆಯಾಗಿದೆ. ಇಡೀ ದೇಶದಲ್ಲಿಯೇ ರಾಷ್ಟ್ರಧ್ವಜ ತಯಾರಿಸುವಂತಹ ಏಕೈಕ ಉತ್ಪಾದನಾ ಮತ್ತು ಸರಬರಾಜು ಮಾಡುವ ತಾಣವಾಗಿದ್ದು ನಮ್ಮ ಕನ್ನಡಿಗರ ಹೆಮ್ಮೆ. ಜೊತೆಗೆ ಖಾದಿ ಗ್ರಾಮೋದ್ಯೋಗದ ಸಂಯುಕ್ತ ಆಶ್ರಯದಲ್ಲಿ ಒಟ್ಟು 52 ಘಟಕಗಳಲ್ಲಿ ನಮ್ಮ ರಾಷ್ಟ್ರದ ಪ್ರತೀಕವಾಗಿ ಧ್ವಜ ನಿರ್ಮಾಣವಾಗುವುದು.ಒಟ್ಟಿನಲ್ಲಿ ಇಡೀ ದೇಶಕ್ಕೆ ರಾಷ್ಟ್ರಧ್ವಜ ನೀಡುವ ಹೆಮ್ಮೆಯ ಸಂಸ್ಥೆ ನಮ್ಮ ಉತ್ತರ ಕರ್ನಾಟಕದಲ್ಲಿದೆ ಎಂಬುದು ನಮ್ಮ ಹೆಮ್ಮೆ. ಜೊತೆಗೆ ರಾಷ್ಟ್ರಭಕ್ತಿ ಹಾಗೂ ಭಾವೈಕ್ಯದ ಸಂಕೇತವಾದ ನಮ್ಮ ತ್ರಿವರ್ಣ ಧ್ವಜಕ್ಕೆ ಕನ್ನಡ ನಾಡಿನ ಸೊಬಗು ಸೇರಿದ್ದು ಕೂಡಾ ವಿಶೇಷ. ಭರತಭೂಮಿ ಇರುವರೆಗೂ ನಮ್ಮ ರಾಷ್ಟ್ರಧ್ವಜ ತಲೆಯೆತ್ತಿ ಹಾರಾಡಲಿ ಎಂಬುವುದೆ ನಮ್ಮೆಲ್ಲರ ಉದ್ದೇಶ.
ನಾಡಿನ ಸಮಸ್ತ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು