ನಿಪ್ಪಾಣಿ: ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಇಂದು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ನಿಪ್ಪಾಣಿ ಮತಕ್ಷೇತ್ರದ ಅಕ್ಕೊಳ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಅವರು, ತಾವು ಶಾಸಕಿಯಾಗಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಮ್ಮ ಮತ ಪತ್ರಿಕೆ ನಮೂನೆಯನ್ನು ನೀಡಿ ಮಾತನಾಡಿದ ಅವರು, ಕಳೆದ ಎರಡು ಬಾರಿ ಶಾಸಕಿಯಾಗಿ ಆಕ್ಕೊಳ ಗ್ರಾಮದಲ್ಲಿ 63 ಕೋಟಿ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಗ್ರಾಮದಲ್ಲಿ ರಸ್ತೆ, ಚರಂಡಿ, ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ, ಐ. ಟಿ. ಐ ಕಾಲೇಜು, ಅಂಗನವಾಡಿ, ದೇವಸ್ಥಾನ ಜೀರ್ಣೋದ್ದಾರ ಹೀಗೆ ಹಲವಾರು ಕಾಮಗಾರಿ ಕೈಗೊಂಡಿದ್ದೇನೆ ಎಂದರು.
ಕ್ಷೇತ್ರದಲ್ಲಿ ಆಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಸದಾವಕಾಶ ನೀಡಿದ್ದೀರಿ. ನಾನು ಕ್ಷೇತ್ರದ ಮತದಾರರು ನನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಂಡಿದ್ದು,. ಕಳೆದ 10 ವರ್ಷಗಳಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜನಸಾಮಾನ್ಯರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಇನ್ನೊಮ್ಮೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಕ್ಷೇತ್ರದ ಬಿಜೆಪಿ ಪ್ರಮುಖರು ಮತ್ತು ನೂರಾರು ಮಹಿಳೆಯರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಅ ಜೊಲ್ಲೆ ಅವರಿಗೆ ಸಾಥ್ ನೀಡಿದರು.