ಕಳಪೆ ಜೀವನಶೈಲಿಯಿಂದಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅವುಗಳಲ್ಲಿ ಮಲಬದ್ಧತೆಯೂ ಒಂದು. ಇದಕ್ಕೆ ದೈನಂದಿನ ಆಹಾರದಲ್ಲಿ ಫೈಬರ್ ಕೊರತೆ, ನಿರ್ಜಲೀಕರಣ ಸೇರಿದಂತೆ ಹಲವು ಕಾರಣಗಳಿರಬಹುದು. ಮಲಬದ್ಧತೆಯಿಂದಾಗಿ ಹೊಟ್ಟೆ ನೋವು, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ನಂತಹ ಹಲವು ಸಮಸ್ಯೆಗಳು ಉಂಟಾಗಬಹುದು. ಆದಾಗ್ಯೂ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಆಹಾರ ಪದಾರ್ಥಗಳ ಸಹಾಯದಿಂದ ನೀವು ಈ ಸಮಸ್ಯೆಗೆ ತ್ವರಿತವಾಗಿ ಪರಿಹಾರಪಡೆಯಬಹುದು.
ಫೈಬರ್ ಭರಿತ ಆಹಾರಗಳು:
ಆಯುರ್ವೇದ ತಜ್ಞರ ಪ್ರಕಾರ, ಅಧಿಕ ಫೈಬರ್ ಹೊಂದಿರುವ ಆಹಾರಗಳ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ. ಇದು ಮಲಬದ್ಧತೆ ಸಮಸ್ಯೆಗೂ ಕೂಡ ಸುಲಭ ಪರಿಹಾರವನ್ನು ನೀಡಬಲ್ಲದು. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಲಭಗೊಳಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಧಾನ್ಯಗಳು, ಹಣ್ಣು-ತರಕಾರಿಗಳು, ಅದರಲ್ಲೂ ನಾರಿನ ಅಂಶವಿರುವಂತಹ ತರಕಾರಿಗಳನ್ನು ಹೆಚ್ಚಾಗಿ ಬಳಸಿ.
ಹೆಚ್ಚಾಗಿ ನೀರು ಕುಡಿಯಿರಿ:
ದೇಹದಲ್ಲಿ ನಿರ್ಜಲೀಕರಣವೂ ಸಹ ಮಲಬದ್ಧತೆ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ, ನಿಮಗೂ ಮಲಬದ್ಧತೆ ಸಮಸ್ಯೆ ಇದ್ದರೆ ಇದನ್ನು ತಪ್ಪಿಸಲು ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಸಾಧ್ಯವಾದಷ್ಟು, ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯಲು ಪ್ರಯತ್ನಿಸಿ.
ಅಜ್ವೈನ್ ನೀರು:
ಅಜ್ವೈನ್ ಉದರದ ಆರೋಗ್ಯಕ್ಕೆ, ಜೀರ್ಣಾಂಗ ವ್ಯವಸ್ಥೆಗೆ ಉತ್ತಮ ಆಹಾರ ಎಂದು ನಿಮಗೆ ತಿಳಿದೇ ಇದೆ. ಇದಕ್ಕಾಗಿ ಸ್ವಲ್ಪ ಅಜ್ವೈನ್ ಅನ್ನು ಕಡಿಮೆ ಉರಿಯಲ್ಲಿ ಹುರಿದು ರುಬ್ಬಿ, ಬಳಿಯಕ ಸ್ವಲ್ಪ ಕಪ್ಪು ಉಪ್ಪನ್ನು ಬೆರೆಸಿ ಒಂದು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಡಿ. ಪ್ರತಿ ನಿತ್ಯ ಅರ್ಧ ಚಮಚದಷ್ಟು ಈ ಪುಡಿಯನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಿದರೆ, ಮಲಬದ್ಧತೆ ಸಮಸ್ಯೆಗೆ ತ್ವರಿತ ಪರಿಹಾರ ಪಡೆಯಬಹುದು.
ಜೀರಿಗೆ ನೀರು:
ಪ್ರತಿ ದಿನ ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದು ಅದನ್ನು ಬಿಸಿ ಮಾಡಿ ಶೋಧಿಸಿ ಕುಡಿಯಿರಿ. ಇದರಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು