ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಮೂವರು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಯಾಸೀರ್ ಅಹ್ಮದ್ಖಾನ್ ಪಠಾಣ್ಗೆ ಶಿಗ್ಗಾಂವಿ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಹಿಂದೆ ಅಲ್ಲಿ ಮೊಹಮ್ಮದ್ ಯೂಸುಫ್ ಸವಣೂರು ಅವರಿಗೆ ಟಿಕೆಟ್ ಘೋಷಿಸಿತ್ತು. ಮಂಗಳವಾರ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, 7 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿತ್ತು. ಶನಿವಾರವಷ್ಟೇ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು.
ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್?
ಕ್ಷೇತ್ರ – ಅಭ್ಯರ್ಥಿ
ಕೆ.ಆರ್.ಪುರಂ ಕ್ಷೇತ್ರ – ಡಿ.ಕೆ.ಮೋಹನ್ ಬಾಬು
ಪುಲಿಕೇಶಿನಗರ ಕ್ಷೇತ್ರ – ಎಸಿ ಶ್ರೀನಿವಾಸ್
ಮುಳಬಾಗಿಲು ಕ್ಷೇತ್ರ – ಡಾ.ಬಿ.ಸಿ.ಮುದ್ದು ಗಂಗಾಧರ
224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿಯಲ್ಲಿ 166, ಎರಡನೇ ಪಟ್ಟಿಯಲ್ಲಿ 23, ಮೂರನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ, ನಾಲ್ಕನೇ ಪಟ್ಟಿಯಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿತ್ತು. 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಾಕಿ ಉಳಿಸಿಕೊಂಡಿತ್ತು. ಇದೀಗ ಮೂವರ ಹೆಸರು ಘೋಷಣೆಯೊಂದಿಗೆ ಇನ್ನೂ 5 ಕ್ಷೇತ್ರಗಳ ಅಭ್ಯರ್ಥಿಗಳ ವಿವರವನ್ನು ಇನ್ನಷ್ಟೇ ಘೋಷಿಸಬೇಕಿದೆ.
ಸಿ.ವಿ.ರಾಮನ್ನಗರ, ರಾಯಚೂರು ನಗರ, ಶಿಡ್ಲಘಟ್ಟ ಕ್ಷೇತ್ರ, ಮಂಗಳೂರು ಉತ್ತರ, ಅರಕಲಗೂಡು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಹೆಸರನ್ನು ಪ್ರಕಟಿಸಲಾಗಿಲ್ಲ. ಈ ಮಧ್ಯೆ, ಬಿಜೆಪಿಯ ಆರ್ ಅಶೋಕ ಸ್ಪರ್ಧಿಸುತ್ತಿರುವ ಪದ್ಮನಾಭನಗರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಣೆಯಾಗಿದ್ದರೂ ಕೊನೇ ಕ್ಷಣದಲ್ಲಿ ಡಿಕೆ ಸುರೇಶ್ ಕಣಕ್ಕಿಳಿಯಲಿದ್ದಾರೆಯೇ ಎಂಬ ಕುತೂಹಲಕ್ಕೂ ಉತ್ತರ ಇನ್ನಷ್ಟೇ ದೊರೆಯಬೇಕಿದೆ.
ಐದನೇ ಪಟ್ಟಿಯಲ್ಲೂ ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಾಗಿಲ್ಲ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಪ್ತರ ನಡುವೆ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಕೃಷ್ಣೇಗೌಡ ಪರ ಸಿದ್ದರಾಮಯ್ಯ ಒಲವು ಹೊಂದಿದ್ದರೆ ಮಾಜಿ ಪೊಲೀಸ್ ಅದಿಕಾರಿ ಶ್ರೀಧರ್ ಗೌಡಗೆ ಟಿಕೇಟ್ ಕೊಡಬೇಕೆಂದು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೇ ದಿನವಾಗಿದೆ.