ಕೂಗು ನಿಮ್ಮದು ಧ್ವನಿ ನಮ್ಮದು

ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೈತಪ್ಪಲು ಕಾರಣವೇನು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಕರ್ನಾಟಕ ಬಿಜೆಪಿಯಲ್ಲಿ ಮತ್ತೊಂದು ಬಹುದೊಡ್ಡ ವಿಕೆಟ್ ಪತನವಾಗಿದೆ. ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಎದ್ದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್‌ ಬೈ ಹೇಳಿದ್ದಾರೆ. ನಿನ್ನೆ(ಏಪ್ರಿಲ್ 15) ಹುಬ್ಬಳ್ಳಿಯ ಕೇಶ್ವಾಪುರದ ನಿವಾಸದಲ್ಲಿ, ಧರ್ಮೇಂದ್ರ ಪ್ರದಾನ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಜೋಶಿ ಸಂಧಾನ ಸಭೆ ನಡೆಸಿದ್ದರು. ಆದ್ರೆ, ಸಭೆ ವಿಫಲವಾಗಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಶೆಟ್ಟರ್ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ರು. ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು.

ಅದರಂತೆ ಇದೀಗ ಶೆಟ್ಟರ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಯಲ್ಲಿರುವ ಸ್ಪೀಕರ್ ನಿವಾಸದತ್ತ ಹೊರಟ್ಟಿದ್ದಾರೆ. ಇದರ ಬೆನ್ನಲ್ಲೇ ಇಂದು(ಏಪ್ರಿಲ್ 16) ಬಿಜೆಪಿ ನಾಯಕರು ಗುಪ್ತ್ ಗುಪ್ತ್ ಸಭೆ ನಡೆಸಿದರು. ಹುಬ್ಬಳ್ಳಿಯಲ್ಲಿರುವ ಸಿಎಂ ಬೊಮ್ಮಾಯಿ ನಿವಾಸದಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಧಾನ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗೋವಿಂದ ಕಾರಜೋಳ, ರಮೇಶ್ ಜಾರಕಿಹೊಳಿ ಅವರು ಉಪಾಹಾರ ಕೂಟದ ನೆಪದಲ್ಲಿ ಪ್ರಸ್ತಕ ಬೆಳವಣಿಗೆ ಬಗ್ಗೆ ಸಮಾಲೋಚನೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೈತಪ್ಪಲು ಕಾರಣವೇನು? ಎಂದು ಸಹ ವಿವರಿಸಿದ್ದು, ಅದು ಈ ಕೆಳಗಿನಂತಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮುಂದುವರೆಸಿಕೊಂಡು ಹೋದ್ರೆ ಚೆನ್ನಾಗಿ ಇರುತ್ತಿತ್ತು. ನಮ್ಮ ಚುನಾವಣೆ ತಂತ್ರ ರೂಪಿಸುತ್ತವೆ. ಪಕ್ಷ ಗೆಲ್ಲತ್ತೆ. ಬದಲಾವಣೆ ತರುವಂತಹ ಕಾಲ ಇದು. ಒಂದು ಪೀಳಿಗೆ ಇಂದ ಮತ್ತೊಂದು ಪೀಳಿಗೆಗೆ ಅವಕಾಶ ಕೊಡಬೇಕಾಗಿತ್ತು. ಅದೇ ಕಾರಣಕ್ಕೆ ಜಗದೀಶ್ ಶೆಟ್ಟರ್ ಟಿಕೆಟ್ ತಪ್ಪಿದೆ. ರಾಜ್ಯ, ಜಿಲ್ಲಾ ಮಟ್ಟದ ಕೋರ್ ಕಮಿಟಿಯಲ್ಲಿ ಅವರ ಹೆಸರು ಇತ್ತು. ಆದ್ರೆ, ಟಿಕೆಟ್ ನಿರಾಕರಿಸಿರುವುದು ಮೇಲಿನ ತೀರ್ಮಾನ. ಶೆಟ್ಟರ್ ರಾಜೀನಾಮೆ ನೀಡಿದ್ದು ಪಕ್ಷಕ್ಕೆ ಡ್ಯಾಮೇಜ್ ಎಂದು ‌ಒಪ್ಪಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ, ಡ್ಯಾಮೇಜ್ ಕಂಟ್ರೋಲ್ ಗೆ ನಾವು ತಂತ್ರ ರೂಪಿಸುತ್ತೇವೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಈ ಭಾಗದ ಹಿರಿಯ, ಪ್ರಮುಖರು. ನಾನು ಅವರ ವಿರುದ್ದ ಸ್ಪರ್ಧೆ ಮಾಡಿದ್ದೆ. ಪಕ್ಷ ಹಲವಾರು ಸಂದರ್ಭದಲ್ಲಿ ಅನೇಕ ನಿರ್ಣಯ ಮಾಡಿದ್ದೇವೆ. ಮೋದಿ ನೇತೃತ್ವದಲ್ಲಿ ಬದಲಾವಣೆ ತರುವ ಪ್ರಯತ್ನ. ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ ಪಯತ್ನಗಳು ನಡೆದಿವೆ. ಯಡಿಯೂರಪ್ಪ ನಮಗೆ ಆದರ್ಶರು,ಮುಖ್ಯಮಂತ್ರಿ ಇರುವಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಅದೇ ರೀತಿ ಈಶ್ವರಪ್ಪ ಚುನಾವಣೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶೆಟ್ಟರ್ ಅವರಿಗೆ ಇದಕ್ಕಿಂತ ದೊಡ್ಡ ಹುದ್ದೆ ಕೊಡುತ್ತೇವೆಎಂದು ಹೇಳಲಾಗಿತ್ತು. ದಿಲ್ಲಿ ಮಟ್ಟದಲ್ಲಿ ಹುದ್ದೆ ಕೊಡುವುದಾಗಿಯೂ ನಡ್ಡಾ ಹಾಗೂ ಅಮಿತ್ ಶಾ ಹೇಳಿದ್ದರು. ನಾನು ನಿನ್ನೆ ಚರ್ಚೆ ಮಾಡಿ ಹೇಳಿದ್ದೆವು. ಅವರು ಹೇಳಿದವರಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದೆವು. ಆದರೂ ಅವರು ಕೇಳುತ್ತಿಲ್ಲ. ಶೆಟ್ಟರ್ ರಾಜೀನಾಮೆ ನೀಡುವುದರಿಂದ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇವತ್ತು ಬಾರತೀಯ ಜನತಾ ಪಕ್ಷ ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದೆ. ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಲಿಂಗಾಯತ ಸಮುದಾಯಕ್ಕೆ ಅತೀ ಹೆಚ್ಚು ಸೀಟ್ ಕೊಟ್ಟಿದ್ದು ಬಿಜೆಪಿ. ಅತೀ ಹೆಚ್ಚು ಮಂತ್ರಿ ಸ್ಥಾನ ಕೊಟ್ಟಿದ್ದು ಬಿಜೆಪಿ. ಯಡಿಯೂರಪ್ಪ ನೇತೃತ್ವದಲ್ಲಿ ಮೊದಲನೇ ಪೀಳಿಗೆ ಬೆಳದು ನಿಂತಿದೆ. ಎರಡನೇ ಪೀಳೀಗೆಯಲ್ಲಿ ಲಿಂಗಾಯತ ಸಮುದಾಯದ ಸಿಸಿ ಪಾಟೀಲ್,ನಿರಾಣಿ, ಸೋಮಣ್ಣ ಬೆಳೆದು ನಿಂತಿದ್ದಾರೆ. ಎಲ್ಲರಿಗೂ ಅವಕಾಶ ಕೊಡಲಾಗಿದೆ ಎಂದರು.

ಇನ್ನು ಬಿಜೆಪಿ ಬಹುಮತ ಪಡೆದುಕೊಂಡರೆ ಸಿಎಂ ರೇಸ್​ನಲ್ಲಿ ಇರುತ್ತಾರೆ ಎಂದು ಶೆಟ್ಟರ್​ಗೆ ಟಿಕೆಟ್​ ನೀಡಲಾಗಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಇದಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, ಸಿಎಂ ರೇಸ್​​ನಲ್ಲಿ ಇರುತ್ತಾರೆ ಎಂದು ಟಿಕೆಟ್ ಕೊಟ್ಟಿಲ್ಲಎನ್ನುವುದು ಸುಳ್ಳು. ಜಗದೀಶ್​ ಶೆಟ್ಟರ್​ ಪಕ್ಷ ಬಿಟ್ಟು ಹೋಗಿರುವುದು ದುರ್ದೈವ. ಸದ್ಯಕ್ಕೆ ಒಂದಷ್ಟು ತೊಡಕಾಗುತ್ತೆ, ಅದನ್ನು ಬಗೆಹರಿಸಲು ರಣತಂತ್ರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು

error: Content is protected !!