ಬೆಳಗಾವಿ: ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಕೆಎಸ್ ಈಶ್ವರಪ್ಪ ಪಕ್ಷದ ಸಿದ್ಧಾಂತ ಎನ್ನುತ್ತಿದ್ದರು, ಈಗ ಎಲ್ಲಿಗೆ ಹೋದರು? ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಲಾಭ ಆಗಲಿದೆ. ಲಕ್ಷ್ಮಣ ಸವದಿ ಕೇಳಿದ ಕಡೆ ಪ್ರಚಾರದ ಜವಾಬ್ದಾರಿ ಕೊಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿಯ ಟಿಕೆಟ್ ವಂಚಿತ ಶಾಸಕ ಅನಿಲ್ ಬೆನಕೆ ನನ್ನ ಸಂಪರ್ಕಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ವರುಣಾ ಕ್ಷೇತ್ರದಲ್ಲಿ ವಸತಿ ಸಚಿವ ವಿ. ಸೋಮಣ್ಣ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ವಿ.ಸೋಮಣ್ಣ ಹೊರಗಿನವರು. ವರುಣಾದಲ್ಲಿ ಅವರ ಒಂದು ಮತವೂ ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ, ಸವದಿ ಮುಖಾಮುಖಿ
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಹಾಗೂ ಲಕ್ಷ್ಮಣ ಸವದಿ ಮುಖಾಮುಖಿಯಾದರು. ನಂತರ ಉಭಯ ನಾಯಕರು ಕೆಲ ಹೊತ್ತು ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರು ಸಾಂಬ್ರಾ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹಳಿಯಾಳಕ್ಕೆ ತೆರಳುತ್ತಿದ್ದರು. ಇದೇ ವೇಳೆ ಕಾಂಗ್ರೆಸ್ ಸೇರ್ಪಡೆ ಬಳಿಕ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದ ಲಕ್ಷ್ಮಣ ಸವದಿ ಮುಖಾಮುಖಿಯಾದರು.
ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಶುಕ್ರವಾರ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಸವದಿ ಯಾವುದೇ ಷರತ್ತು ನಮ್ಮ ಮುಂದಿಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಮತ್ತು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದಷ್ಟೇ ಹೇಳಿದ್ದಾರೆ ಎಂದು ತಿಳಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಇಂದೇ ಬಿಡುಗಡೆ; ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಇಂದೇ ಬಿಡುಗಡೆಯಾಗಬಹುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ 5 ಕ್ಷೇತ್ರಗಳ ಹೆಸರು ಘೋಷಣೆಯಾಗಲಿದೆ. ನನ್ನನ್ನು ಎಲ್ಲಿ ಬೇಕಾದರೂ ಪ್ರಚಾರಕ್ಕೆ ಬಳಸಿಕೊಳ್ಳಿ ಎಂದು ಸವದಿ ಹೇಳಿದ್ದಾರೆ. ಬೆಳಗಾವಿ ಸೇರಿ ಹಲವೆಡೆ ಕಾಂಗ್ರೆಸ್ ಪರ ಸವದಿ ಪ್ರಚಾರ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ